ಎರಡು ತಂಡಗಳ ಮಧ್ಯೆ ನಡೆದ ಗಲಾಟೆ; ಚೂರಿ ಇರಿತದಿಂದ ಇಬ್ಬರ ಸಾವು: 5 ಮಂದಿ ಸ್ಥಿತಿ ಗಂಭೀರ
ನವದೆಹಲಿ: ಎರಡು ತಂಡಗಳ ಮಧ್ಯೆ ನಡೆದ ಗಲಾಟೆಯ ವೇಳೆ ಇಬ್ಬರು ಚೂರಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದು, 5 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ದೆಹಲಿಯ ಮುಂಡ್ಕಾದಲ್ಲಿ ನಡೆದಿದೆ.
ದೆಹಲಿಯ ಮುಂಡ್ಕಾಡಾ ರಸ್ತೆಯಲ್ಲಿ ಸೋನು ಹಾಗೂ ಅಭಿಷೇಕ್ ಎಂಬವರ ಮಧ್ಯೆ ಹೊಡೆದಾಟ ಆರಂಭವಾಗಿದೆ. ಈ ವೇಳೆ ಅಭಿಷೇಕ್ ಹಾಗೂ ಆತನ ಸ್ನೇಹಿತರು ಸೋನು ಎಂಬಾತನ ಮೇಲೆ ಹಲ್ಲೆ ನಡೆಸಿ ಚೂರಿಯಿಂದ ಇರಿದಿದ್ದಾರೆ. ಇದನ್ನು ತಡೆಯಲು ಹೋದ ಸೋನು ಕಡೆಯವರಿಗೂ ಚೂರಿ ಇರಿತದಿಂದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಲಾಟೆಯ ವೇಳೆ ಅಭಿಷೇಕ್'ಗೂ ಚೂರಿ ಇರಿಯಲಾಗಿದೆ. ಗಲಾಟೆಯಲ್ಲಿ ಒಟ್ಟು 7 ಮಂದಿಗೆ ಗಾಯಗಳಾಗಿದ್ದು, ಚೂರಿ ಇರಿತಕ್ಕೊಳಗಾದ ಸೋನು ಹಾಗೂ ನವೀನ್ ಎಂಬವರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಗಲಾಟೆಯಿಂದ ಗಾಯಗೊಂಡಿರುವ ಅಭಿಷೇಕ್ ಹಾಗೂ ನಾಲ್ಕು ಮಂದಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಾಟೆ ಮಾಡಿರುವವರೆಲ್ಲರೂ ನಮ್ಕೀನ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.