ಹುಲ್ಲು ತಿನ್ತಾವೆ ಮಕ್ಕಳು...!
Thursday, March 9, 2023
ಹುಲ್ಲು ತಿನ್ತಾವೆ ಮಕ್ಕಳು
ಹುಲ್ಲು ತಿನ್ತಾವೆ,
ಹಾಲು ಕುಡಿವ ಚಿಣ್ಣರೆಲ್ಲ
ಹುಲ್ಲು ತಿನ್ತಾವೆ,
ಮೋಜು,ಮಸ್ತಿ ಮಾಡಬೇಡಿ
ಹುಲ್ಲು ತಿನ್ತಾವೆ ಮಕ್ಕಳು,
ತಿಂದು ಉಂಡು ಕೊಬ್ಬಬೇಡಿ
ಹುಲ್ಲು ತಿನ್ತಾವೆ ಮಕ್ಕಳು.
ಮಂಗಗಳಿಗೆ ಅಂಗಿ ಹಾಕುವ
ಮಮ್ಮಿಗಳಿರಾ,ಸುತ್ತ ಮುತ್ತ
ಸ್ವಲ್ಪ ನೋಡಿ ಹುಲ್ಲು ತಿನ್ತಾವೆ
ಮಕ್ಕಳು ಹುಲ್ಲು ತಿನ್ತಾವೆ.
ಗೋವುಗಳಿಗೆ ಆಲಯ ಕಟ್ಟುವ
ಅಪ್ಪಗಳಿರಾ,ಬಯಲ ತುಂಬಾ
ಮಕ್ಕಳೆಲ್ಲ ಹುಲ್ಲು ತಿನ್ತಾವೆ.
ನಾಯಿಗಳಿಗೆ ಮಾಂಸ ತಿನಿಸುವ
ಅಣ್ಣಗಳಿರಾ,ಸ್ವಲ್ಪ ಕೇಳಿ ಪುಟ್ಟ
ಮಕ್ಕಳು ಹುಲ್ಲು ತಿನ್ತಾವೆ.
ಬೆಕ್ಕುಗಳಿಗೆ ಬೆಣ್ಣೆ ತಿನಿಸುವ
ಅಕ್ಕಗಳಿರಾ,ಅಕ್ಕ ಪಕ್ಕ ಸ್ವಲ್ಪ ನೋಡಿ
ಹುಲ್ಲು ತಿನ್ತಾವೆ ಮಕ್ಕಳು.
ಮದುವೆ,ಮುಂಜಿ,ಹಬ್ಬಗಳಲ್ಲಿ
ಅನ್ನ ಚೆಲ್ಬೇಡಿ,ಗಂಜಿಯಿಲ್ಲದ
ಮಕ್ಕಳೆಲ್ಲ ಹುಲ್ಲು ತಿನ್ತಾವೆ.
ಹೊಟೇಲ್, ಕ್ಲಬ್,ಪಬ್ ಗಳಲ್ಲಿ
ತಿಂದು ತೇಗ್ಬೇಡಿ..ಹೊಟ್ಟೆಗಿಲ್ಲದ
ಮಕ್ಕಳೆಲ್ಲ ಹುಲ್ಲು ತಿನ್ತಾವೆ.
ಓಟಿಗಾಗಿ ನೋಟುಗಳನು
ಮೂಟೆ ಕಟ್ಬೇಡಿ,..ಸುಟ್ಟು ಹೋಗ್ತಿವೆ
ಪುಟ್ಟ ಮಕ್ಕಳು ಹುಲ್ಲು ತಿನ್ತಾವೆ.
ಯಾವ ದೇಶವೋ, ಯಾವ ಧರ್ಮವೋ
ಯಾರಿಗೇ ಗೊತ್ತು
ಹೊಟ್ಟೆ ಹಸಿದಿದೆ ತಿನ್ನೋಕಿಲ್ಲ
ಅಷ್ಟೇ ಗೊತ್ತು..ಅದಕ್ಕೆ ಕೈಗೆ ಸಿಕ್ಕಿದ
ಹುಲ್ಲ ಹೆಕ್ಕಿ ಬಾಯಿಗಿಡ್ತಾವೆ
ನಮ್ಮ ಮಕ್ಕಳು ಹುಲ್ಲು ತಿನ್ತಾವೆ.
ಉಷಾ.ಎಂ