ಮಂಗಳೂರು ಉತ್ತರ ಕ್ಷೇತ್ರದಲ್ಲಿ ಚುನಾವಣಾ ಕಾವು ಬಲುಜೋರು; ಕಾಂಗ್ರೆಸ್'ನಿಂದ ಇನಾಯತ್ ಅಲಿ ಹೆಸರು ಅಂತಿಮ, ಅಧಿಕೃತ ಘೋಷಣೆಯೊಂದೇ ಬಾಕಿ..!
ಮಂಗಳೂರು: ರಾಜ್ಯದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದ್ದು, ಇತ್ತ ಕರಾವಳಿ ಭಾಗದಲ್ಲಿಯೂ ಚುನಾವಣಾ ಚಟುವಟಿಕೆ ಗರಿಗೆದರಿದೆ.
ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿನ ಎಲ್ಲಾ ಗೊಂದಲಕ್ಕೆ ಬಹುತೇಕ ಬ್ರೇಕ್ ಬಿದ್ದಿದೆ ಎಂದು ಹೇಳಲಾಗಿದ್ದು, ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕಳೆದ ಮೂರು ಅವಧಿಯಂತೆ ಈ ಬಾರಿಯೂ ಅಲ್ಪಸಂಖ್ಯಾತ ಸಮುದಾಯದ ಪಾಲಾಗಲಿದೆ ಎಂದು ತಿಳಿದುಬಂದಿದೆ. ಅದರಂತೆ ಹೊಸ ಯುವ ಮುಖ ಎಂಬಂತೆ ವಿಧ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಇನಾಯತ್ ಅಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಟಿಕೆಟ್ ರೇಸ್ ನಲ್ಲಿ ಮಂಚೂಣಿಯಲ್ಲಿರುವ ಮಾಜಿ ಶಾಸಕ ಮೊಹಿದೀನ್ ಬಾವ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸೂಕ್ತ ಸ್ಥಾನಮಾನ ದೊರಕಿಸಿ ಕೊಡುವ ಭರವಸೆಯನ್ನು ಕೂಡ ನೀಡಿದೆ ಎಂದು ತಿಳಿದು ಬಂದಿದೆ. ಇದರಿಂದ ಟಿಕೆಟ್ ವಿಚಾರದಲ್ಲಿನ ಗೊಂದಲಕ್ಕೆ ಬಹುತೇಕ ಬ್ರೇಕ್ ಬಿದ್ದಂತಾಗಿದೆ.
ಬದಲಾದ ಸನ್ನಿವೇಶದಲ್ಲಿ ಈ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಡಾಗುವುದು ಖಚಿತವಾಗಿದೆ.
ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಸಮ್ಮುಖದಲ್ಲಿ ಸುಮಾರು 150 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದ್ದು, ಅದರಲ್ಲಿ ಮಂಗಳೂರು ಉತ್ತರ ಕ್ಷೇತ್ರಕ್ಕೆ ಇನಾಯತ್ ಅಲಿಯವರ ಹೆಸರು ಕೂಡ ಅಂತಿಮವಾಗಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಈಗಾಗಲೇ ಸ್ಪಷ್ಟಪಡಿಸಿವೆ.
ಈ ಕ್ಷೇತ್ರದಲ್ಲಿ ಇನಾಯತ್ ಅಲಿ ಅವರಿಗೆ ಟಿಕೆಟ್ ಈಗಾಗಲೇ ಅಂತಿಮ ಗೊಂಡಿದ್ದರೂ, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಕಾಂಗ್ರೆಸ್ ರಾಜ್ಯ ಹಾಗು ಕೇಂದ್ರ ನಾಯಕರು ಕೂಡ ಇನಾಯತ್ ಅಲಿ ಬೆನ್ನ ಹಿಂದೆ ಇದ್ದಾರೆ ಎಂದು ತಿಳಿದು ಬಂದಿದೆ. ಇನಾಯತ್ ಅಲಿ ಅವರ ಸರಳ, ಸಚ್ಚಾರಿತ್ರ ವ್ಯಕ್ತಿತ್ವ, ಸಮಾಜಸೇವೆ ಇದೆಲ್ಲವೂ ಈ ಬಾರಿಯ ಚುನಾವಣೆಗೆ ಅವರಿಗೆ ಸಾಥ್ ನೀಡಿದೆ.
ಗೆಲ್ಲುವ ಕುದುರೆ ಎಂದೇ ಬಿಂಬಿತರಾಗಿರುವ ಇನಾಯತ್ ಅಲಿ ಪ್ರಚಾರ ಭರಾಟೆ ಕೂಡಾ ಜೋರಾಗಿದೆ. ಎಲ್ಲರೊಂದಿಗೆ ಬೆರೆಯುವ ಜೊತೆಗೆ ಸಮಾಜ ಸೇವೆಯ ಮೂಲಕವೇ ಹೆಸರು ಗಳಿಸಿರುವ ಇನಾಯತ್ ಅಲಿಯ ಹಿಂದೆ ದೊಡ್ಡ ಯುವಕರ ದಂಡೇ ಇದೆ. ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ನಡೆಯುವ ಕಾರ್ಯಕ್ರಮ, ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿರುವ ಇನಾಯತ್ ಅಲಿ, ಪಕ್ಷದ ಪ್ರಚಾರ, ತಿರುಗಾಟದಲ್ಲಿಯೇ ಈಗ ಬ್ಯುಸಿಯಾಗಿದ್ದಾರೆ.