ಮಂಗಳೂರಿನ ಜ್ಯುವೆಲ್ಲರಿ ಶಾಪ್ನಲ್ಲಿ ನಡೆದ ಸಿಬ್ಬಂದಿ ಕೊಲೆ ಪ್ರಕರಣ: ಕೊನೆಗೂ ಆರೋಪಿ ಸೆರೆ: ಕೊಲೆಗೆ ನಿಜವಾದ ಕಾರಣ ಇಲ್ಲಿದೆ....
ಮಂಗಳೂರು(Headlines Kannada): ನಗರದ ಹಂಪನಕಟ್ಟೆಯಲ್ಲಿರುವ ಆಭರಣ ಮಳಿಗೆಯಲ್ಲಿ ರಾಘವೇಂದ್ರ ಆಚಾರ್ ಎಂಬವರನ್ನು ಇರಿದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಎಯನ್ನು ಕೇರಳದ ಕಾಸರಗೋಡಿನಲ್ಲಿ ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೇರಳದ ಕಲ್ಲಿಕೋಟೆಯ ಚಟ್ಟನಾಡುತ್ ಕೆಳಮನೆ ನಿವಾಸಿ ಶಿಫಾಸ್(33) ಎಂದು ಗುರುತಿಸಲಾಗಿದೆ. ದರೋಡೆ ನಡೆಸುವ ಉದ್ದೇಶದಿಂದಲೇ ಈ ಹತ್ಯೆಯನ್ನು ಆರೊಪಿ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫೆಬ್ರವರಿ 3 ರಂದು ಮಂಗಳೂರಿನ ಹಂಪನಕಟ್ಟೆಯ ಚಿನ್ನದ ಅಂಗಡಿಯಲ್ಲಿ ರಾಘವೇಂದ್ರ ಆಚಾರ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಆರೋಪಿಯ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದರು. ಜೊತೆಗೆ ಸಿಟಿವಿಯಲ್ಲಿ ಸೆರೆಯಾದ ಫೋಟೋಟವನ್ನು ಕೂಡ ಪೊಲೀಸರು ಬಿಡುಗಡೆಗೊಳಿಸಿದ್ದರು.
ಚಿನ್ನದ ಅಂಗಡಿಯಲ್ಲಿ ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ (55) ಒಬ್ಬರೇ ಇದ್ದ ವೇಳೆ ಅವರನ್ನು ದುಷ್ಕರ್ಮಿ ಇರಿದು ಕೊಂದು ಪರಾರಿಯಾಗಿದ್ದ. ಈ ಕೊಲೆ ನಡೆದ ದಿನವೇ ಜ್ಯುವೆಲ್ಲರಿಯಲ್ಲಿದ್ದ ಚಿನ್ನಾಭರಣ ಮಿಸ್ಸಿಂಗ್ ಆಗಿತ್ತು.
ಆರೊಪಿ ಶಿಫಾಸ್'ನನ್ನು ಕಾಸರಗೋಡು ಡಿವೈಎಸ್ಪಿ ಸುಧಾಕರನ್ ನೇತೃತ್ವದ ಪೊಲೀಸ್ ತಂಡದಿಂದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತ ಆರೋಪಿ ಶಿಫಾಸ್'ನನ್ನು ಮಂಗಳೂರು ಪೊಲೀಸರಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ದರೋಡೆ ನಡೆಸುವ ಉದ್ದೇಶದಿಂದಲೇ ಆರೊಪಿ ಕೊಲೆ ನಡೆಸಿರುವ ಬಗ್ಗೆ ಆರೊಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.