ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ: 6 ಮಂದಿಯ ವಿರುದ್ಧ FIR ; ಬಿಜೆಪಿ ಶಾಸಕ ವಿರೂಪಾಕ್ಷಪ್ಪ A1 ಆರೋಪಿ; ಬಂಧನದ ಭೀತಿ ಎದುರಿಸುತ್ತಿರುವ ಶಾಸಕ!
ಬೆಂಗಳೂರು: ಗುತ್ತಿಗೆದಾರನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಮಾಡಾಳ್ ಪ್ರಶಾಂತ್ ಸೇರಿದಂತೆ 6 ಮಂದಿಯ ವಿರುದ್ಧ FIR ದಾಖಲಾಗಿದೆ.
ಗುತ್ತಿಗೆದಾರನಿಂದ ಲಂಚ ಪಡೆದ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದ್ದು, BJP ಶಾಸಕರಿಗೆ ಈಗ ಬಂಧನ ಭೀತಿ ಎದುರಾದಂತಾಗಿದೆ.
ಶ್ರೇಯಸ್ ಕಶ್ಯಪ್ ಎಂಬವರು ನೀಡಿದ್ದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು FIR ದಾಖಲಿಸಿದ್ದು, ಮಾಡಾಳ್ ವಿರೂಪಾಕ್ಷಪ್ಪ ಎ1(ಮೊದಲ ಆರೋಪಿ) ಆಗಿದ್ದು, ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಎ2(2ನೇ ಆರೋಪಿ), KSDL ಅಕೌಂಟೆಂಟ್ ಸುರೇಂದ್ರ ಎ3, ಮಾಡಾಳ್ ಪ್ರಶಾಂತ್ ಸಂಬಂಧಿ ಸಿದ್ದೇಶ್ ಎ4, ಅರೋಮಾ ಕಂಪನಿ ಸಿಬ್ಬಂದಿ ಆಲ್ಬರ್ಟ್ ನಿಕೋಲಾ ಎ5, ಅರೋಮಾ ಕಂಪನಿ ಸಿಬ್ಬಂದಿ ಗಂಗಾಧರ ಎ6 ಆರೋಪಿಯಾಗಿದ್ದಾರೆ.
ಲಂಚಕ್ಕೆ ಸಂಬಂಧಿಸಿ ತಮ್ಮ ವಿರುದ್ಧ FIR ದಾಖಲಾಗುತ್ತಿದ್ದಂತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಭೀತಿ ಎದುರಾಗಿದ್ದು, ಜಾಮೀನು ಪಡೆಯಲು ತೆರೆಮರೆಯಲ್ಲಿ ಅವರು ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪರಿಗಾಗಿ ಲೋಕಾಯುಕ್ತ ಪೊಲೀಸರ 3 ತಂಡಗಳಿಂದ ಹುಟುಕಾಟ ನಡೆಸಲಾಗುತ್ತಿದೆ. ಶಾಸಕರ ನಿವಾಸ, ಅವರ ಕುಟುಂಬಕ್ಕೆ ಸೇರಿದ ಕ್ರಷರ್ ಕಚೇರಿ, ತೋಟದ ಮನೆ ಮೇಲೆ ಶುಕ್ರವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ಚಿನ್ನ, ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿವೆ ಎನ್ನಲಾಗಿದೆ.