ಉಡುಪಿ: ಉತ್ತಮ ಕಾಂಕ್ರೀಟ್ ರಸ್ತೆ ಅಗೆದು ಹೊಸ ರಸ್ತೆ ನಿರ್ಮಾಣ: ಸಾರ್ವಜನಿಕರ ಆಕ್ರೋಶ
ಉಡುಪಿ: ಇಲ್ಲಿನ ಶಾರದಾ ಕಲ್ಯಾಣ ಮಂಟಪದಿಂದ ಬೀಡಿನಗುಡ್ಡೆ ಸಂಪರ್ಕಿಸುವ ಉತ್ತಮ ಗುಣಮಟ್ಟದಿಂದ ಕೂಡಿದ ಸುಸ್ಥಿತಿಯಲ್ಲಿದ್ದ ಕಾಂಕ್ರೀಟ್ ರಸ್ತೆಯನ್ನು ಕಾಮಗಾರಿಯ ನೆಪದಲ್ಲಿ ಅಗೆಯುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ತಿಂಚು ದಪ್ಪ, ಕಬ್ಬಿಣದ ಸರಳು ಅಳವಡಿಸಿ, ಕೆಲವು ಸಮಯದ ಹಿಂದೆ ಹೊಸದಾಗಿ ನಿರ್ಮಾಣ ಮಾಡಿರುವ ಕಾಂಕ್ರೀಟ್ ರಸ್ತೆ ಇದಾಗಿದ್ದು. ಯಾವುದೇ ಹೊಂಡಗುಂಡಿಗಳಿಲ್ಲದೆ ಸುಸ್ಥಿತಿಯಲ್ಲಿತ್ತು. ಮತ್ತಷ್ಟು ವರ್ಷಗಳು ಬಾಳಿಕೆ ಬರುವ ರಸ್ತೆ ಇದಾಗಿದೆ. ಇಂತಹ ರಸ್ತೆಯನ್ನು ವಿನಾಕಾರಣ ಅಗೆದು, ಹೊಸದಾಗಿ ಕಳಪೆ ಗುಣಮಟ್ಟದಲ್ಲಿ ನಿರ್ಮಾಣ ಮಾಡುತ್ತಿರುವುದಕ್ಕೆ ಸ್ಥಳೀಯರು ಖಂಡನೆ ವ್ಯಕ್ತಪಡಿಸಿದ್ದಾರೆ.
ಕಳೆದ ಎಂಟು ತಿಂಗಳ ಹಿಂದೆಯಷ್ಟೆ ನಿರ್ಮಾಣ ಮಾಡಿರುವ ರಸ್ತೆಯನ್ನು ಅಗೆದು ಹಾಳುಗೆಡವಲಾಗಿದೆ. ಈ ರೀತಿ ಸಾರ್ವಜನಿಕರ ಹಣವನ್ನು ವ್ಯರ್ಥಗೊಳಿಸುವ ಕುಕೃತ್ಯ ಆಡಳಿತ ವ್ಯವಸ್ಥೆಗಳಿಂದ ನಡೆಯುತ್ತಿದೆ. ಆದಷ್ಟು ಬೇಗ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.