ಮದುವೆಯ ಬಗ್ಗೆ ಉರುಮಣೆ ಜಮಾಅತರ ನಿರ್ಧಾರ ಶ್ಲಾಘನೀಯ....!

ಮದುವೆಯ ಬಗ್ಗೆ ಉರುಮಣೆ ಜಮಾಅತರ ನಿರ್ಧಾರ ಶ್ಲಾಘನೀಯ....!

 

 -ಡಿ.ಐ. ಅಬೂಕರ್ ಕೈರಂಗಳ

ದೇರಳಕಟ್ಟೆ ಸಮೀಪದ ಉರುಮಣೆ ಎಂಬಲ್ಲಿರುವ ಮುಹ್ಯುದ್ದೀನ್ ಜುಮಾ ಮಸ್ಜಿದ್ ಹಾಗೂ ಹಿದಾಯತುಲ್ ಇಸ್ಲಾಮ್ ಮದರಸ ಆಡಳಿತ ಸಮಿತಿಯು ಜಮಾಅತರೆಲ್ಲರ ಸಹಮತದೊಂದಿಗೆ ಒಂದು ನಿರ್ಧಾರ ಕೈಗೊಂಡಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಈ ನಿರ್ಧಾರ ಬಹಳ ಪ್ರಸ್ತುತ. 

ಇಂದು ಮುಸ್ಲಿಮ್ ಸಮಾಜವು ಮದುವೆಯ ವೇಳೆ ಅನೇಕ ಅನಪೇಕ್ಷಿತ, ದುಂದುವೆಚ್ಚದ ರೀತಿ ರಿವಾಜುಗಳನ್ನು ಎಳೆದು ಹಾಕಿಕೊಂಡಿದೆ. ಇದರಿಂದಾಗಿ ಕೆಲವು ಕಡೆಗಳಿಂದ ವರದಿಯಾಗುತ್ತಿರುವ ಘಟನೆಗಳು ಮುಸ್ಲಿಮ್ ಸಮಾಜ ತಲೆತಗ್ಗಿಸುವಂತೆ ಮಾಡಿವೆ. ಪ್ರಾಣಹಾನಿ, ಮಾನಹಾನಿಗೂ ಕಾರಣವಾಗಿ ಇತರ ಸಮುದಾಯದವರಿಗೆ ಮಾದರಿಯಾಗಬೇಕಿದ್ದ ಮುಸ್ಲಿಮ್ ಮದುವೆಗಳು ಇತರ ಸಮುದಾಯದವರು ನಮ್ಮ ಮದುವೆಗಳ ಆವಾಂತರಗಳನ್ನು ನೋಡಿ  ನಗಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. 

ಕೇರಳ ಮತ್ತು ಕರ್ನಾಟಕದಿಂದ ಅನೇಕ  ಅನಪೇಕ್ಷಿತ ಘಟನೆಗಳು ಮುಸ್ಲಿಮ್ ಸಮುದಾಯದಿಂದ ಮಾತ್ರ ವರದಿಯಾಗುತ್ತಿದ್ದು ಇಂತಹ ಒಂದೇ ಒಂದು ಘಟನೆ ಇತರ ಸಮುದಾಯಗಳಿಂದ ವರದಿಯಾಗದಿರುವುದು ನಾವೆಲ್ಲ ಗಮನಿಸಬೇಕಾದ ವಿಚಾರವಾಗಿದೆ.

ನಮ್ಮ ಮದುವೆ ಸಮಾರಂಭಗಳಲ್ಲಿ ಏನೆಲ್ಲಾ ಚೇಷ್ಠೆ, ಕುಚೇಷ್ಠೆಗಳು, ಅನಗತ್ಯ ವೆಚ್ಚಗಳು, ಅರ್ಥಶೂನ್ಯ ರಿವಾಜುಗಳು ನಡೆಯುತ್ತಿವೆ ಎಂಬುದನ್ನು ನಾನಿಲ್ಲಿ ವಿವರಿಸಬೇಕಾಗಿಲ್ಲ. ಕಾರಣ, ಅದು ಈಗ ಎಲ್ಲರೂ ಕಾಣುವ, ಅನುಭವಿಸುವ ಒಂದು ಕಾಮನ್ ವಿಷಯವಾಗಿದೆ. ಕೆಲವು ಘಟನೆಗಳು ತೀವ್ರ ಅತಿರೇಕಕ್ಕೆ ಹತ್ತಿ, ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗುತ್ತವೆ. ಹೆಚ್ಚಿನವು ಸ್ಥಳೀಯ ಮಟ್ಟಕ್ಕೆ ಮಾತ್ರ ಸೀಮಿತಗೊಂಡಿರುತ್ತವೆ. ಅನ್ಯ ಸ್ತ್ರೀ ಪುರುಷರ ಮುಕ್ತ ಬೆರಕೆಯಂತಹ ಹರಾಮ್ ಕಾರ್ಯಗಳೂ ಇಂದು ಮದುವೆ ಸಮಾರಂಭಗಳಲ್ಲಿ ವಿಜೃಂಭಿಸುತ್ತವೆ. ಮೆಹಂದಿ ( ಮೊಯಿಲಾಂಜಿ) ಎಂಬ ಹೆಸರಲ್ಲಿ ಮದುವೆಯ ಮುನ್ನಾದಿನ ನಡೆಯುವ ಯಾವುದೇ ಅಗತ್ಯವಿಲ್ಲದ ಕಾರ್ಯಕ್ಕೆ ಮದುವೆಯ ಊಟದಷ್ಟೇ ಖರ್ಚಾಗುತ್ತದೆ. ಉಳಿದವರು ಮಾಡುವಾಗ ನಾವು ಮಾಡದಿದ್ದರೆ ಹೇಗೆ ಎಂಬ ಭಾವನೆಗೆ ಕಟ್ಟು ಬಿದ್ದು ಅವರಿವರಿಂದ ಕಾಡಿ ಬೇಡಿ ಹೆಣ್ಮಕ್ಕಳ  ಮದುವೆ ಮಾಡಿಸುವ ಬಡವರೂ ಕೂಡಾ ಈ ದುಂದು ವೆಚ್ಚ ಮಾಡುತ್ತಾರೆ. 

ಈ ಕುಚೇಷ್ಠೆಗಳನ್ನು ಜಮಾಅತ್ ಆಡಳಿತವು ಮಟ್ಟ ಹಾಕಬೇಕಾದುದು ಅನಿವಾರ್ಯ ವಾಗಿದೆ. ಆದರೆ ಈ ವಿಷಯದಲ್ಲಿ ಜಮಾಅತ್ ಕಮಿಟಿಗಳು ಮೌನ ವಹಿಸಿರುವಾಗ ಉರುಮಣೆ ಜಮಾಅತರು   ಅನಿಷ್ಟಪದ್ಧತಿಗಳಿಗೆ ಕಡಿವಾಣ ಹಾಕುವ ದಿಟ್ಟ ಹೆಜ್ಜೆ ಇರಿಸಿರುವುದು ಶ್ಲಾಘ್ಯವೂ ಮಾದರೀ ಯೋಗ್ಯವೂ ಆಗಿದೆ. 

ಮದುವೆಯ ಪೂರ್ವೋತ್ತರ ದಿನಗಳಲ್ಲಿ ಹಳದಿ ಮದುವೆ, ಬ್ರೈಡ್ ಶೋ, ಬಂದಿ, ಚರಡ್ ಹೆಸರಲ್ಲಿ  ಅನ್ಯಪುರುಷರ ಮುಂದೆ ವಧುವಿನ ಪ್ರದರ್ಶನ, ಮದುಮಗನ ಕಡೆಯವರ ಬೈಕ್ ರೈಡ್, ಸ್ಪ್ರೇ, ಪಟಾಕಿ, ನೃತ್ಯ ಮುಂತಾದ ಅನಿಸ್ಲಾಮಿಕ  ಚಟುವಟಿಕೆಗಳನ್ನು ಜಮಾಅತ್ ವ್ಯಾಪ್ತಿಯೊಳಗೆ ನಿಷೇಧಿಸಲಾಗಿದೆ. 

ಉರುಮಣೆ ಜಮಾಅತರ ಈ ಕ್ರಮವನ್ನು ಎಲ್ಲಾ ಜಮಾಅತರೂ ಅನುಸರಿಸಿ ನಮ್ಮ ಸಮುದಾಯದಲ್ಲಿ ಮದುವೆಯ ನೆಪದಲ್ಲಿ  ನಡೆಯುತ್ತಿರುವ ಅನಿಸ್ಲಾಮಿಕ, ಅನಾಚಾರಗಳಿಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ. 

ಉರುಮಣೆ ಜಮಾಅತರಿಗೆ ಅಭಿನಂದನೆಗಳೊಂದಿಗೆ...

Ads on article

Advertise in articles 1

advertising articles 2

Advertise under the article