ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬೆಂಗಳೂರಿನಲ್ಲಿ ಮತ್ತೋರ್ವ ಆರೋಪಿ ಬಂಧನ
ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA)ದ ಅಧಿಕಾರಿಗಳು ಶನಿವಾರ ಮತ್ತೊಬ್ಬ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತೌಫೀಲ್ ಎಂದು ಗುರುತಿಸಲಾಗಿದ್ದು, ಶನಿವಾರ ರಾತ್ರಿ 9.30ರ ಸುಮಾರಿಗೆ ಬೆಂಗಳೂರಿನ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ವಶಕ್ಕೆ ಪಡೆದಿದ್ದಾರೆ.
NIA ಅಧಿಕಾರಿಗಳು ಆರೋಪಿ ಪತ್ತೆಗೆ ಈ ಹಿಂದೆ ರೂ. 5 ಲಕ್ಷ ಹಣ ಬಹುಮಾನ ಘೋಷಣೆ ಮಾಡಿದ್ದು, ಆರೋಪಿಗಳಿಗೆ ತೀವ್ರ ಶೋಧ ನಡೆಸಿದ್ದರು. ಶನಿವಾರ ಖಚಿತ ಮಾಹಿತಿ ಮೇರೆಗೆ ಸುಮಾರು 10ಕ್ಕೂ ಹೆಚ್ಚು NIA ಅಧಿಕಾರಿಗಳು ತೌಫಿಲ್ ಮನೆ ಹೋಗಿ ಬಂಧಿಸಿದ್ದಾರೆ.
2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರನ್ನು ಮೂವರು ದುಷ್ಕರ್ಮಿಗಳು ಬಂದು ಮಾರಾಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು. ಈ ಹತ್ಯೆ ಪ್ರಕರಣ ಸಂಬಂಧ ಈವರೆಗೆ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 20 ಆರೋಪಿಗಳ ವಿರುದ್ಧ ಬೆಂಗಳೂರಿನ NIA ವಿಶೇಷ ನ್ಯಾಯಾಲಯಕ್ಕೆ 1,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.