ಆಸ್ಟ್ರೇಲಿಯಾದ ಹಿಂದು ದೇವಾಲಯದ ಮೇಲೆ ಖಲಿಸ್ತಾನಿ ಬೆಂಬಲಿಗರಿಂದ ದಾಳಿ; ಭಾರತಕ್ಕೆ ಧಿಕ್ಕಾರ, ಮೋದಿ ಟೆರರಿಸ್ಟ್ ಎಂದೆಲ್ಲಾ ಗೀಚಿದ ಖಲಿಸ್ತಾನಿ ಬೆಂಬಲಿಗರು
ಬ್ರಿಸ್ಬೇನ್: ಆಸ್ಟ್ರೇಲಿಯಾದ ಹಿಂದು ದೇವಾಲಯಗಳ ಮೇಲೆ ಖಲಿಸ್ತಾನಿ ಬೆಂಬಲಿಗರಿಂದ ದಾಳಿ ಮುಂದುವರಿದಿದ್ದು, ಶನಿವಾರ ಆಸ್ಟ್ರೇಲಿಯಾದ ಬ್ರಿಸ್ಬೇನ್'ನಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನದ ಗೋಡೆಗಳ ಮೇಲೆ ಖಲಿಸ್ತಾನಿ ವಿಧ್ವಂಸಕ ಬರಹಗಳನ್ನು ಗೀಚಿ ದೇವಸ್ಥಾನವನ್ನು ವಿರೂಪಗೊಳಿಸಲಾಗಿದೆ.
ಭಾರತದ ವಿರುದ್ಧ ಬರಹಗಳನ್ನು ಗೀಚುವ ಜೊತೆಗೆ ಪ್ರಧಾನಿ ಮೋದಿಯ ವಿರುದ್ಧ ಕೂಡ ಕೆಂಡ ಕಾರಲಾಗಿದೆ. ಇದು ಖಲಿಸ್ತಾನಿ ಬೆಂಬಲಿಗರ ಕೃತ್ಯವಾಗಿದ್ದು, ಮೇಲಿಂದ ಮೇಲೆ ನಡೆಯುತ್ತಲೇ ಇದೆ.
ಕಳೆದ 2 ತಿಂಗಳಲ್ಲಿ ಆಸ್ಟ್ರೇಲಿಯಾದ ಹಿಂದು ದೇವಾಲಯಗಳ ಮೇಲೆ ನಡೆಯುತ್ತಿರುವ 4ನೇ ದಾಳಿ ಇದಾಗಿದ್ದು, ಖಲಿಸ್ತಾನಿ ಬೆಂಬಲಿಗರು ದೇವಸ್ಥಾನದ ಗೋಡೆ ಮೇಲೆ ಭಾರತಕ್ಕೆ ಧಿಕ್ಕಾರ, ಮೋದಿ ಟೆರರಿಸ್ಟ್ ಎಂದೆಲ್ಲಾ ಗೀಚಿದ್ದು, ಖಲಿಸ್ತಾನಿ ರಾಷ್ಟ್ರದ ಹೋರಾಟಕ್ಕೆ ಅಡ್ಡಿ ಮಾಡದಂತೆ ಪಂಜಾಬಿಗಳಿಗೆ ಕರೆ ನೀಡಲಾಗಿದೆ.
ದೇವಾಲಯದ ಅರ್ಚಕರು ಹಾಗೂ ಭಕ್ತರು ಶನಿವಾರ ಬೆಳಗ್ಗೆ ಕರೆ ಮಾಡಿ ನಮ್ಮ ದೇವಾಲಯದ ಗೋಡೆ ಮೇಲೆ ಖಲಿಸ್ತಾನಿ ಬೆಂಬಲಿಗರು ದ್ವೇಷ ಬರಹಗಳನ್ನು ಗೀಚಿ ವಿರೂಪಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು.. ಇದು ಅತ್ಯಂತ ಖಂಡನೀಯ ಕೃತ್ಯವಾಗಿದ್ದು, 7 ದಿನಗಳಲ್ಲಿ ನಡೆದಿರುವ 2ನೇ ಘಟನೆ ಎಂದು ದೇವಾಲಯದ ಅಧ್ಯಕ್ಷ ಸತೀಂದರ್ ಶುಕ್ಲಾ ಆರೋಪಿಸಿದ್ದಾರೆ.