ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಪುತ್ರನ ಮನೆಯಿಂದ ಬರೋಬ್ಬರಿ 6 ಕೋಟಿ ರೂ.ವಶ
ಬೆಂಗಳೂರು: ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ನಿನ್ನೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಅವರ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಇದುವರೆಗೆ ಪ್ರಶಾಂತ್ ಮಾಡಾಳ್ ಮನೆಯಿಂದ ಬರೋಬ್ಬರಿ 6 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ನಿನ್ನೆ ರಾತ್ರಿಯಿಂದಲೇ ಪ್ರಶಾಂತ್ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ವೇಳೆ ಅಧಿಕಾರಿಗಳು ಬರೋಬ್ಬರಿ 6 ಕೋಟಿ ವಶಪಡಿಸಿಕೊಂಡಿದ್ದು, ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಮನೆ ಕಚೇರಿಯಲ್ಲಿ ಸಿಕ್ಕ ಹಣ ಯಾರದ್ದು ಎಂಬುದರ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಲಾಗುತ್ತಿದೆ.
ಪ್ರಕರಣ ಸಂಬಂಧ ಈಗಾಗಲೇ ಪ್ರಶಾಂತ್ ಸೇರಿ 5 ಮಂದಿಯನ್ನು ಬಂಧಿಸಲಾಗಿದ್ದು, ಇವರ ಬಳಿ ಹಣದ ಮೂಲದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಲಂಚ ಹಾಗು ಮನೆಯಲ್ಲಿ ಸಿಕ್ಕ ಕೋಟ್ಯಂತರ ರೂ. ಬಗ್ಗೆ ಪ್ರಶಾಂತ್ ಮಾಡಾಳ್ ಏನನ್ನೂ ಬಾಯ್ಬಿಡುತ್ತಿಲ್ಲ ಎನ್ನಲಾಗಿದೆ.
ಇನ್ನು ಬೆಂಗಳೂರಿನ ಕ್ರೆಸೆಂಟ್ ರಸ್ತೆಯ ಕಚೇರಿ ಹಾಗೂ ಸಂಜಯನಗರದ ಮನೆಯಲ್ಲಿಯೂ ಹಣ ಪತ್ತೆಯಾಗಿದೆ. KSDL MD ಮನೆಯ ಮೇಲೆ ಕೂಡ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.