ಬಿಜೆಪಿ ಶಾಸಕನ ಪುತ್ರನ ಬಳಿ 6 ಕೋಟಿ ರೂ.ನಗದು ವಶ: ಇಕಟ್ಟಿಗೆ ಸಿಲುಕಿದ ಬಿಜೆಪಿ ಸರಕಾರ: ಇದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ? ಭ್ರಷ್ಟಾಚಾರದ ಹೊಣೆ ಹೊತ್ತು CM ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ
ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿಯೇ ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ BWSSB ಮುಖ್ಯ ಲೆಕ್ಕಾಧಿಕಾರಿ ಮಾಡಾಳ್ ಪ್ರಶಾಂತ್ ಕಚೇರಿ ಹಾಗು ಮನೆಯಲ್ಲಿ ಲೋಕಾಯುಕ್ತ ದಾಳಿಯ ವೇಳೆ 6 ಕೋಟಿ ರೂಪಾಯಿ ನಗದು ಹಣ ಸಿಕ್ಕಿದ್ದು, ಬಿಜೆಪಿ ಸರಕಾರವನ್ನು ಮತ್ತೊಂದು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.
ನಿನ್ನೆ ಸಾಯಂಕಾಲದಿಂದ ಇಂದು ಶುಕ್ರವಾರ ಬೆಳಗಿನ ಜಾವದವರೆಗೂ ಲೋಕಾಯುಕ್ತ ದಾಳಿ ಮುಂದುವರಿದಿದ್ದು, ಈ ವೇಳೆ ಮಾಡಾಳ್ ಪ್ರಶಾಂತ್ ಮನೆಯಲ್ಲಿ ರಾಶಿ ರಾಶಿ ಹಣ ಪತ್ತೆಯಾಗಿದ್ದು, ಇದು ರಾಜಕೀಯ ವಲಯದಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳಿಗೆ ದೊಡ್ಡ ಅಸ್ತ್ರ ಕೊಟ್ಟಂತಾಗಿದೆ.
ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧ ಆರೋಪ ಮಾಡುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ, ಈಗ ಚೆನ್ನಗಿರಿ ಬಿಜೆಪಿ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತ(KSDL) ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಮನೆ ಹಾಗೂ ಕಚೇರಿಯಲ್ಲಿ ಕೈ ಇಟ್ಟಲೆಲ್ಲ ಕಂತೆ ಕಂತೆ ಹಣ ಸಿಗುತ್ತಿರುವುದು ರಾಜ್ಯ ಸರಕಾರದ ವಿರುದ್ಧ ಸಾಕ್ಷ್ಯ ಒದಗಿಸಿದಂತಾಗಿದೆ.
ಇಷ್ಟು ದಿನ BJP ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ, ಎಲ್ಲಾ ಇಲಾಖೆಗಳಲ್ಲಿ, ಟೆಂಡರ್ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೇಳುತ್ತಾ ಬರುತ್ತಿದ್ದ ಕಾಂಗ್ರೆಸ್, ಆಡಳಿತ ಪಕ್ಷ BJP ಮೇಲೆ ಹರಿಹಾಯಲು, ಚುನಾವಣಾ ಪ್ರಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ.
'40% ಕಮಿಷನ್ನಿಗೆ ದಾಖಲೆ ಕೊಡಿ ಎನ್ನುತ್ತಿದ್ದ @BSBommai ಅವರೇ, ಇಂದು ಲೋಕಾಯುಕ್ತ ದಾಳಿಯಲ್ಲಿ ಕಮಿಷನ್ ಕರ್ಮಕಾಂಡಕ್ಕೆ ದಾಖಲೆ ಸಿಕ್ಕಿತಲ್ಲವೇ? ಇದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ? ಈಗ ಭ್ರಷ್ಟಾಚಾರಕ್ಕೆ ಹೊಣೆ ಹೊತ್ತು ರಾಜೀನಾಮೆ ಕೊಡುವಿರಾ? ನಿಮ್ಮದು #40PercentSarkara ಎನ್ನಲು ಇನ್ನೇನು ಬೇಕು?' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬೊಮ್ಮಾಯಿಯವರ ರಾಜೀನಾಮೆಗೆ ಒತ್ತಡ ಹಾಕಿದೆ.
40% ಕಮಿಷನ್ನಿಗೆ ದಾಖಲೆ ಕೊಡಿ ಎನ್ನುತ್ತಿದ್ದ @BSBommai ಅವರೇ,
— Karnataka Congress (@INCKarnataka) March 2, 2023
ಇಂದು ಲೋಕಾಯುಕ್ತ ದಾಳಿಯಲ್ಲಿ ಕಮಿಷನ್ ಕರ್ಮಕಾಂಡಕ್ಕೆ ದಾಖಲೆ ಸಿಕ್ಕಿತಲ್ಲವೇ? ಇದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ?
ಈಗ ಭ್ರಷ್ಟಾಚಾರಕ್ಕೆ ಹೊಣೆ ಹೊತ್ತು ರಾಜೀನಾಮೆ ಕೊಡುವಿರಾ?
ನಿಮ್ಮದು #40PercentSarkara ಎನ್ನಲು ಇನ್ನೇನು ಬೇಕು @BJP4Karnataka?