ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಪರಾರಿ; ಬಂಧನಕ್ಕೆ ಹುಡುಕಾಟ ನಡೆಸುತ್ತಿರುವ ಪೊಲೀಸರು
ಅಮೃತಸರ: ಖಲಿಸ್ತಾನಿ ಪ್ರತ್ಯೇಕ ರಾಷ್ಟ್ರ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಪರಾರಿಯಾಗಿದ್ದು, ನಾವು ಅವನನ್ನು ಹುಡುಕುತ್ತಿದ್ದೇವೆ ಮತ್ತು ನಾವು ಶೀಘ್ರದಲ್ಲೇ ಅವನನ್ನು ಬಂಧಿಸುತ್ತೇವೆ ಎಂದು ಜಲಂಧರ್ ಪೊಲೀಸ್ ಕಮಿಷನರ್ ಕುಲದೀಪ್ ಸಿಂಗ್ ಚಾಹಲ್ ಹೇಳಿದ್ದಾರೆ.
ನೂರಾರು ಪೊಲೀಸರ ತಂಡ ಶನಿವಾರ ಅಮೃತ್‌ಪಾಲ್ ಸಿಂಗ್ ಮನೆ ಮೇಲೆ ದಾಳಿ ನಡೆಸಿದಾಗ ಪರಾರಿಯಾಗಿದ್ದ. ಈ ವೇಳೆ ಬೆನ್ನತ್ತಿ ಅಡ್ಡಗಟ್ಟಿದ್ದರೂ ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
7 ಜಿಲ್ಲೆಗಳ ಸಿಬ್ಬಂದಿಯನ್ನು ಒಳಗೊಂಡ ರಾಜ್ಯ ಪೊಲೀಸರ ವಿಶೇಷ ತಂಡವು ಅಮೃತ್‌ಪಾಲ್ ಸಹಚಚರು ಜಲಂಧರ್‌ನ ಶಾಹಕೋಟ್ ತಹಸಿಲ್‌ಗೆ ತೆರಳುತ್ತಿದ್ದಾಗ ಹಿಂಬಾಲಿಸಿದೆ. ಈ ವೇಳೆ ಆತ ಬೈಕ್‌ನಲ್ಲಿ ವೇಗವಾಗಿ ಸಂಚರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಆತನ 78 ಮಂದಿ ಅಮೃತ್‌ಪಾಲ್ ಆಪ್ತರನ್ನು ಬಂಧಿಸಲಾಗಿದ್ದು, ಬಂಧಿಸಿದ ಬೆನ್ನಲ್ಲೇ ಆತನ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡುತ್ತಿರುವ ವೀಡಿಯೋಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್‌ನ ಹಲವೆಡೆ ಇಂಟರ್‌ನೆಟ್ ಸೇವೆಗಳನ್ನು ಬಂದ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಪಂಜಾಬ್‌ನಲ್ಲಿ ತನ್ನದೇ ಸಶಸ್ತ್ರ ಗುಂಪುಗಳನ್ನು ಕಟ್ಟಿಕೊಂಡು ತಿರುಗಾಡುತ್ತಿದ್ದ ಅಮೃತ್‌ಪಾಲ್ ‘ವಾರಿಸ್ ಪಂಜಾಬ್ ದಿ’ ಹೆಸರಿನ ಧಾರ್ಮಿಕ ಸಂಘಟನೆ ನಡೆಸುತ್ತಿದ್ದ. ಇತ್ತೀಚೆಗೆ ಅಮೃತ್‌ಪಾಲ್ ಸಿಂಗ್ ಸಹಚರನನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಆತನ ಶಸ್ತ್ರಧಾರಿ ಸಹಚರರು ಅಮೃತಸರದ ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು.