ರೌಡಿ ಶೀಟರ್ ಫೈಟರ್ ರವಿಗೆ ಕೈಮುಗಿದ ಮೋದಿ: ಶೋಭ ಕರಂದ್ಲಾಜೆ ಹೇಳಿದ್ದೇನು ನೋಡಿ...
ಬೆಂಗಳೂರು: ಪ್ರಧಾನಿ ಮೋದಿ ಅವರು ರೌಡಿ ಶೀಟರ್ ಫೈಟರ್ ರವಿಗೆ ಕೈಮುಗಿಯುತ್ತಿರುವ ಫೋಟೋ ಭಾರೀ ವೈರಲ್ ಆಗುತ್ತಿದ್ದು, ಈ ಮಧ್ಯೆ ಈ ಬಗ್ಗೆ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಮೋದಿಯವರಿಗೆ ಫೈಟರ್ ರವಿ ಯಾರೆಂದು ತಿಳಿದಿಲ್ಲ...ಮಂಡ್ಯ ಭೇಟಿ ವೇಳೆ ಸ್ವಾಗತ ಸಮಿತಿಯಲ್ಲಿ ರವಿ ಅವರನ್ನು ಸೇರಿಸಿಕೊಂಡಿರುವುದು ಭದ್ರತಾ ಲೋಪ ಎಂದಿದ್ದಾರೆ.
ಪ್ರಧಾನಿ ಮೋದಿ ಮಂಡ್ಯಕ್ಕೆ ಆಗಮಿಸಿದ ವೇಳೆ ರೌಡಿಶೀಟರ್ ಫೈಟರ್ ರವಿ ಕೂಡ ಸ್ವಾಗತಿಸಿದ್ದು, ಮೋದಿಯೂ ಆತನಿಗೆ ಕೈ ಮುಗಿದಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುವ ಜೊತೆಗೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಮುಗಿಬಿದ್ದಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೌಡಿಶೀಟರ್ ಫೈಟರ್ ರವಿ ಯಾರೆಂದು ತಿಳಿದಿರಲಿಲ್ಲ, ಇದಕ್ಕೆ ಮೋದಿ ಜವಾಬ್ದಾರರಲ್ಲ ಎಂದ ಶೋಭಾ, ಪ್ರಧಾನಿಗೆ ಸ್ವಾಗತ ಕೋರುವವರ ಪಟ್ಟಿಯಲ್ಲಿ ರೌಡಿಶೀಟರ್ ರವಿ ಹೆಸರು ಹೇಗೆ ಬಂತು ಎಂಬುದು ಗೊತ್ತಿಲ್ಲ. ಫೈಟರ್ ರವಿ ಸ್ವಾಗತ ಕೋರಿರುವುದು ಅಲ್ಲಿನ ಸ್ಥಳೀಯರ ಕಣ್ತಪ್ಪಿನಿಂದ ಆಗಿರುವ ಸಾಧ್ಯತೆ ಇದೆ ಎಂದರು.