ಹೆಜಮಾಡಿ ಟೋಲ್ ಗೇಟ್ ಸಮೀಪ ಸ್ಕೂಟರಿಗೆ ಡಿಕ್ಕಿ ಹೊಡೆದ ಟ್ಯಾಂಕರ್: ತೀರ್ಥಹಳ್ಳಿ ಮೂಲದ ದಂಪತಿ ಸ್ಥಳದಲ್ಲಿಯೇ ಸಾವು
ಮೂಲ್ಕಿ: ಸ್ಕೂಟರೊಂದಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನಲ್ಲಿದ್ದ ಗಂಡ-ಹೆಂಡತಿ ಇಬ್ಬರೂ ದಾರುಣ ಸಾವನ್ನಪ್ಪಿರುವ ಘಟನೆ ಹೆಜಮಾಡಿ ಟೋಲ್ ಗೇಟ್ ಸಮೀಪ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ದಂಪತಿಯನ್ನು ತೀರ್ಥಹಳ್ಳಿ ಮೂಲದ ಅಕ್ಬರ್ ಪಾಶ(63) ಹಾಗು ಅವರ ಪತ್ನಿ ಖದೀಜಾ(53) ಎಂದು ಗುರುತಿಸಲಾಗಿದೆ.
ಪಾಸ್ ಪೋರ್ಟ್ ರಿನೀವಲ್'ಗಾಗಿ ತೀರ್ಥಹಳ್ಳಿಯಿಂದ ಮಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ದಂಪತಿಗಳು ಸ್ಕೂಟರಿನಲ್ಲಿ ತೆರಳುತ್ತಿದ್ದ ವೇಳೆ ಹೆಜಮಾಡಿ ಟೋಲ್ ಗೇಟ್ ಸಮೀಪ ಈ ಅಪಘಾತ ಸಂಭವಿಸಿದೆ. ಇವರೊಂದಿಗೆ ಇವರ ಕುಟುಂಬದ ಇನ್ನಿಬ್ಬರು ಕೂಡ ತೀರ್ಥಹಳ್ಳಿಯಿಂದ ಬಂದಿದ್ದು, ಅವರು ಅಪಘಾತ ನಡೆದ ವೇಳೆ ಮಂಗಳೂರಿನತ್ತ ಮುಂದೆ ಸಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನ ಪಾಸ್ ಪೋರ್ಟ್ ಕಚೇರಿಯಲ್ಲಿ ಇಂದು ಪಾಸ್ಪೋರ್ಟ್ ರಿನೀವಲ್ ಮಾಡಲಿಕ್ಕೆ ಸಮಯ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ದಂಪತಿ ಸ್ಕೂಟರಿನಲ್ಲಿ ತೀರ್ಥಹಳ್ಳಿಯಿಂದಲೇ ಉಡುಪಿ ಮಾರ್ಗವಾಗಿ ಮಂಗಳೂರಿನತ್ತ ಹೊರಟಿದ್ದರು. ಈ ವೇಳೆ ಅಪಘಾತ ನಡೆದಿದೆ. ಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಆಗಮಿಸಿದು, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದರು. ಈ ಬಗ್ಗೆ ಪಡುಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.