ಪಡುಬಿದ್ರಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಮುಂಬಯಿ, ಬೆಂಗಳೂರು ರೈಲು ನಿಲುಗಡೆಗೊಳಿಸುವಂತೆ ಒತ್ತಾಯ; ಕೂಡಲೇ ಸ್ಪಂದಿಸದಿದ್ದರೆ ಬೃಹತ್ ಪ್ರತಿಭಟನೆ, ರೈಲ್ ರೋಕೋ ನಡೆಸಲು ತೀರ್ಮಾನ
ಉಚ್ಚಿಲ: ಬೆಳಪು (ಪಡುಬಿದ್ರಿ) ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಮುಂಬಯಿ ಹಾಗು ಬೆಂಗಳೂರು ರೈಲು ನಿಲುಗಡೆಗೊಳಿಸುವಂತೆ ಬೆಳಪು ಗ್ರಾಮಸ್ಥರು ಹಾಗು ರೇಲ್ವೆ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಕಾರವಾರ ಕೊಂಕಣ ರೈಲ್ವೆ ವಿಭಾಗದ ರೀಜಿನಲ್ ಮೆನೇಜರ್'ಗೆ ಬೆಳಪು ಸ್ಟೇಷನ್ ಮಾಸ್ಟರ್ ಗಣಪತಿ ನಾಯಕ್ ಮೂಲಕ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಮುಖಂಡ ದೇವಿ ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಮನವಿ ನೀಡಲಾಯಿತು. ಮನವಿಯ ವೇಳೆ ಮಾತನಾಡಿದ ದೇವಿ ಪ್ರಸಾದ್ ಶೆಟ್ಟಿ, ಕಾಪು ತಾಲೂಕು ಕೇಂದ್ರಕ್ಕೆ ಹತ್ತಿರದಲ್ಲಿರುವ ಮತ್ತು ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ ಸಹಿತವಾಗಿ ಎಲ್ಲಾ ವಿಧದಲ್ಲೂ ಬೆಳೆಯುತ್ತಿರುವ ಬೆಳಪು ಗ್ರಾಮದಲ್ಲಿ ಕೊಂಕಣ ರೈಲು ಕರಾವಳಿಗೆ ಕಾಲಿಟ್ಟ ಪ್ರಾರಂಭದಲ್ಲೇ (1991-92) ಆರಂಭಗೊಂಡಿದ್ದ ಬೆಳಪು (ಪಡುಬಿದ್ರಿ) ರೈಲು ನಿಲ್ದಾಣವು ಇ೦ದಿಗೂ ಹಾಗೆಯೇ ಉಳಿದಿರುವುದು ಮತ್ತು ಉಡುಪಿ ಮತ್ತು ಮೂಲ್ಕಿ ರೈಲು ನಿಲ್ದಾಣಗಳ ಜೊತೆಗೆ ಪ್ರಾರಂಭಗೊಂಡಿದ್ದ ಬೆಳಪು (ಪಡುಬಿದ್ರಿ) ರೈಲು ನಿಲ್ದಾಣವು ಮೇಲ್ದರ್ಜೆಗೇರಬೇಕೆನ್ನುವುದು ನಮ್ಮೆಲ್ಲರ ಬಹುಕಾಲದ ಕನಸಾಗಿದೆ. ಕಾಪು ತಾಲೂಕು ಕೇಂದ್ರ ಮತ್ತು ಕಾಪು ಪುರಸಭೆಗೆ ಹತ್ತಿರದಲ್ಲಿರುವ ರೈಲು ನಿಲ್ದಾಣವು ಬೆಳಪು, ಎಲ್ಲೂರು, ಮಜೂರು, ಕುತ್ಯಾರು, ಮುದರಂಗಡಿ, ಶಿರ್ವ, ಉಚ್ಚಿಲ, ಎರ್ಮಾಳು, ಪಡುಬಿದ್ರಿ ಗ್ರಾಮ ಪಂಚಾಯತ್ ಗಳ ಮಧ್ಯ ಭಾಗದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 66ಕ್ಕೂ ಸನಿಹದಲ್ಲಿದೆ. ಬೆಳಪು (ಪಡುಬಿದ್ರಿ) ರೈಲು ನಿಲ್ದಾಣದ ಅಭಿವೃದ್ಧಿಯ ಬಗ್ಗೆ ಕಳೆದ 25 ವರ್ಷಗಳಿಂದಲೂ ನಿರಂತರ ಹೋರಾಟ ನಡೆಸುತ್ತಿದ್ದು, ಮತ್ಸ್ಯಗಂಧ ಮತ್ತು ಬೆಂಗಳೂರು ರೈಲುಗಳ ನಿಲುಗಡೆ ಬಗ್ಗೆ ಇಲಾಖೆ ಹಾಗೂ ಸ್ಥಳೀಯ ಶಾಸಕರು, ಸಂಸದರು ಮತ್ತು ಜನಪ್ರತಿನಿಧಿಗಳಿಗೂ ಮನವಿ ಹಲವು ಬಾರಿ ಮನವಿ ಮಾಡಿದ್ದೇವೆ ಎಂದರು.
ನಮ್ಮ ಹೋರಾಟಕ್ಕೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ರೈಲ್ವೇ ಸಚಿವ ಡಿ.ವಿ. ಸದಾನಂದ ಗೌಡ ಅವರೂ ಬೆಂಬಲ ಸೂಚಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಆದರೂ ಇಲಾಖೆ ಮಾತ್ರಾ ಈ ಬಗ್ಗೆ ದಿವ್ಯ ಮೌನ ವಹಿಸಿರುವುದನ್ನು ಖಂಡಿಸಿ ಮತ್ತೆ ಸಭೆ ಸೇರಿ, ಎಲ್ಲಾ ಗ್ರಾಮಗಳ ಜನರ ಉಪಸ್ಥಿತಿಯಲ್ಲಿ ನಮ್ಮ ಬೇಡಿಕೆಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ನಮ್ಮ ಬೇಡಿಕೆಗಳಿಗೆ ಇನ್ನೂ ಸೂಕ್ತ ಸ್ಪಂಧನೆ ಅಥವಾ ಪ್ರತಿಕ್ರಿಯೆಗಾಗಿ ಒಂದು ತಿಂಗಳು ಕಾಯುತ್ತೇವೆ. ಮುಂದೆಯೂ ಸೂಕ್ತ ಸ್ಪಂಧನ ದೊರಕದಿದ್ದಲ್ಲಿ ಸಾವಿರಾರು ಮಂದಿಯನ್ನು ಸೇರಿಸಿಕೊಂಡು ಬೃಹತ್ ಪ್ರತಿಭಟನೆ ಮತ್ತು ರೈಲ್ ರೋಕೋ ನಡೆಸಲು ತೀರ್ಮಾನಿಸಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಪಡುಬಿದ್ರಿ ರೈಲು ನಿಲ್ದಾಣದ ಹೆಸರನ್ನು ಪಡುಬಿದ್ರಿ ಬದಲಿಗೆ ಪಣಿಯೂರು ಎಂದು ಪುನರ್ ನಾಮಕರಣ ಮಾಡಿ
ಬೆಳಪುನಲ್ಲಿರುವ ರೈಲ್ವೇ ಸ್ಟೇಷನ್ ಗೆ ಪಡುಬಿದ್ರಿ ಎಂದು ಹೆಸರಿಡುವ ಮೂಲಕ ಅವೈಜ್ಞಾನಿಕಕ್ಕೆ ಅಂದೇ ಚಾಲನೆ ಕೊಟ್ಟಿದ್ದಾರೆ. ಇದು ಜನರಿಗೆ ಗೊಂದಲವನ್ನುಂಟು ಮಾಡುತ್ತದೆ. ಬೆಳಪು (ಪಡುಬಿದ್ರಿ) ರೈಲು ನಿಲ್ದಾಣದ ಹೆಸರನ್ನು ಪಡುಬಿದ್ರಿ ಬದಲಿಗೆ ಪಣಿಯೂರು ಎಂದು ಪುನರ್ ನಾಮಕರಣ ಮಾಡಿ ಬೆಳಪು ಗ್ರಾಮಕ್ಕೆ ಗೌರವ ನೀಡಿ ಎಂದರು.
ಮನವಿ ನೀಡಿದ ವೇಳೆ ಬೆಳಪು ಗ್ರಾ.ಪಂ. ಅಧ್ಯಕ್ಷೆ ಶೋಭಾ ಭಟ್, ಬಡಾ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಗಣೇಶ್, ಮಾಜಿ ತಾ.ಪಂ. ಸದಸ್ಯರಾದ ಯು.ಸಿ. ಶೇಖಬ್ಬ, ಮೈಕಲ್ ಡಿ ಸೋಜ, ಮಲ್ಲಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಸಾಧಿಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷೆ ಜೇಬಾ ಸೆಲ್ವನ್, ಉಚ್ಚಿಲ ರಿಕ್ಷಾ ಯೂನಿಯನ್ ಅಧ್ಯಕ್ಷ ಸಿರಾಜ್ NH , ಪ್ರಮುಖರಾದ ಯೋಗೀಶ್ ಶೆಟ್ಟಿ ಪಣಿಯೂರುಗುತ್ತು, ಲೋಕೇಶ್ ಶೆಟ್ಟಿ ಬೆಳಪುಗುತ್ತು, ಕರುಣಾಕರ ಶೆಟ್ಟಿ ಪಣಿಯೂರು ಗುತ್ತು, ದಿವಾಕರ ಶೆಟ್ಟಿ, ಉದಯ ಶೆಟ್ಟಿ, ಸುಶೀನ್ ಶೆಟ್ಟಿ, ರಾಕೇಶ್ ಕುಂಜೂರು, ಜಹೀರ್ ಅಹಮದ್, ಸಿರಾಜ್ ಅಹಮದ್, ಸಂತೋಷ್ ಶೆಟ್ಟಿ, ಹರೀಶ್ ನಾಯಕ್ ಕಾಪು, ಬೆಳಪು, ಉಚ್ಚಿಲ, ಎಲ್ಲೂರು ಗ್ರಾ.ಪಂ. ಸದಸ್ಯರು, ಪುರಸಭಾ ಸದಸ್ಯರು, ಉಚ್ಚಿಲ, ಪಣಿಯೂರು, ಬೆಳಪು, ಎರ್ಮಾಳು ರಿಕ್ಷಾ ಚಾಲಕರು ಹಾಗೂ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.