
ಉಮ್ರಾ ಯಾತ್ರೆಗೆ ತೆರಳಿದ್ದ ಕೋಟಾದ ಇಬ್ಬರು ಮಹಿಳೆಯರು ಮೃತ್ಯು
ಉಡುಪಿ: ಉಮ್ರಾ ಯಾತ್ರೆ ನಿರ್ವಹಿಸಲೆಂದು ಸೌದಿ ಅರೇಬಿಯಾದ ಮೆಕ್ಕಾಕ್ಕೆ ತೆರಳಿದ್ದ ಬ್ರಹ್ಮಾವರದ ಇಬ್ಬರು ಮಹಿಳೆಯರು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಮಹಿಳೆಯರನ್ನು ಬ್ರಹ್ಮಾವರ ತಾಲೂಕಿನ ಮಧುವನ ಅಚ್ಲಾಡಿಯ ಮರಿಯಮ್ಮ(66) ಹಾಗೂ ಖತಿಜಮ್ಮ(68) ಎಂದು ಗುರುತಿಸಲಾಗಿದೆ.
ಮಂಗಳೂರಿನ ಏಜೆನ್ಸಿಯೊಂದರ ಮೂಲಕ ಇತರ 32 ಮಂದಿ ಜೊತೆಗೆ ಮಾ.1ರಂದು ಮಂಗಳೂರಿನಿಂದ ಸೌದಿ ಅರೇಬಿಯಾದ ಮಕ್ಕಾಕ್ಕೆ ಇವರಿಬ್ಬರು ಯಾತ್ರೆಗೈದಿದ್ದರು.
ಉಮ್ರಾ ಯಾತ್ರೆ ಮುಗಿಸಿ ಮದೀನಾಕ್ಕೆ ಹೋಗಲು ತಯಾರಿ ನಡೆಸುತ್ತಿದ್ದಾಗ ಮರಿಯಮ್ಮ ಮಾ.9ರಂದು ಭಾರತೀಯ ಕಾಲಮಾನ ಬೆಳಿಗ್ಗೆ 5 ಗಂಟೆಗೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. 2 ದಿನಗಳ ನಂತರ ಅಂದರೆ ಮಾ.11ರಂದು ಭಾರತದ ಕಾಲಮಾನ ಅಪರಾಹ್ನ 3 ಗಂಟೆಗೆ ಅನಾರೋಗ್ಯಕ್ಕೀಡಾದ ಖತಿಜಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಮೃತಪಟ್ಟ ಇಬ್ಬರ ಜೊತೆ ಕೋಟ ಮಧುವನ ಅಚ್ಲಾಡಿಯ ಇನ್ನಿಬ್ಬರು ಮಹಿಳೆಯರಿದ್ದರು. ಮೃತರಿಬ್ಬರು ಸಂಬಂಧಿಗಳಾಗಿದ್ದು, ಇಬ್ಬರ ಮೃತದೇಹವನ್ನು ಮೆಕ್ಕಾದಲ್ಲಿ ದಫನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.