ಕಂಠಪೂರ್ತಿ ಕುಡಿದ ವರ ಮಂಟಪದಲ್ಲೇ ಮಲಗಿಬಿಟ್ಟ; ಮದುವೆ ರದ್ದುಗೊಳಿಸಿದ ವಧು

ದಿಸ್ಪುರ್: ವರನೊಬ್ಬ ಕಂಠಪೂರ್ತಿ ಕುಡಿದು ಬಂದು ಮಂಟಪದಲ್ಲೇ ಮಲಗಿಬಿಟ್ಟ ಎಂಬ ಕಾರಣಕ್ಕೆ ಮದುವೆಯೊಂದು ಮುರಿದುಬಿದ್ದ ಘಟನೆ ಅಸ್ಸಾಂನ ನಲ್ಬರಿ ಜಿಲ್ಲೆಯಲ್ಲಿ ನಡೆದಿದೆ.

ಅಸ್ಸಾಂನ ನಲ್ಬರಿ ಜಿಲ್ಲೆಯ ನಿವಾಸಿ ಪ್ರಸೇನಜಿತ್ ಹಲೋಯ್ ಮದುವೆಯ ದಿನವೇ ಕಂಠಪೂರ್ತಿ ಕುಡಿದು ಬಂದಿದ್ದಾನೆ. ಮಂಟಪದಲ್ಲಿ ಪಂಡಿತರು ಮಂತ್ರ ಹೇಳಿಕೊಡಲು ಮುಂದಾದಾಗ ಆತ ನಶೆಯಲ್ಲಿದ್ದ ಕಾರಣ ಮಂತ್ರ ಹೇಳಲೂ ಸಾಧ್ಯವಾಗದೇ ಆತ ಅಲ್ಲೇ ಮಲಗಿಬಿಟ್ಟಿದ್ದಾನೆ. ಇದರಿಂದ ವಧು ತನ್ನ ಮದುವೆಯನ್ನೇ ರದ್ದು ಮಾಡಿದ್ದಾಳೆ.

ವರ ಕಂಠಪೂರ್ತಿ ಕುಡಿದ ನಶೆಯಲ್ಲಿ ತೂರಾಡುವುದನ್ನು ಕಂಡು ವಧು ಮಂಟಪದಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದು, ಬಳಿಕ ಪಂಡಿತರು ಹೇಳಿಕೊಟ್ಟ ಮಂತ್ರಗಳನ್ನು ವರ ಉಚ್ಛರಿಸಲಾಗದೇ ಮಂಟಪದಲ್ಲಿಯೇ ಮಲಗಿದ್ದಾನೆ. ಈ ವೇಳೆ ವರನ ಕಡೆಯವರು ಹೆಚ್ಚಿನ ಮಂದಿ ಕುಡಿದುಕೊಂಡೇ ಮದುವೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೆಲ್ಲಾ ಕಂಡ ವಧುವಿನ ಕಡೆಯವರು ಮದುವೆಯನ್ನು ಕ್ಯಾನ್ಸಲ್ ಮಾಡಿ, ನಡೆದ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.