ವಚನಾನಂದ ಸ್ವಾಮೀಜಿ ಉಚ್ಛಾಟನೆ; ಈ ಬಗ್ಗೆ ಸ್ವಾಮೀಜಿ ಹೇಳಿದ್ದೇನು..?

ದಾವಣಗೆರೆ: ಪ್ರಮುಖ ಬೆಳವಣಿಗೆಯೊಂದರಲ್ಲಿ ಸೋಮವಾರ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಖ್ಯಾತ ಯೋಗಗುರು ವಚನಾನಂದ ಶ್ರೀ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ಅವರು, ಇಂದು ಪಂಚಮಸಾಲಿಗಳು ಪ್ರಬಲರಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಗಳನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಹರಿಹರದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಿಂದ ತನ್ನನ್ನು ಉಚ್ಚಾಟನೆ ಮಾಡಿದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಪಂಚಮಸಾಲಿ ನಾಯಕರು ಮತ್ತು ಸ್ವಾಮೀಜಿಗಳು ಇಂದು ಗಟ್ಟಿಯಾಗುತ್ತಿದ್ದಾರೆ. ಈ ಕಾರಣಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಇರಬಹುದು, ಹಿಂದೆ ಸಿದ್ದಲಿಂಗ ಸ್ವಾಮೀಜಿ ಇರಬಹುದು, ಈಗ ನಮ್ಮನ್ನು ಟಾರ್ಗೆಟ್‌ ಮಾಡಲಾಗಿದೆ ಎಂದು ದೂರಿದರು.

ಟ್ರಸ್ಟಿಗಳ ಬಗ್ಗೆ ಮಾತನಾಡಿದ ಅವರು, ಕೆಲವರಿಗೆ ನಾವು ಹಿಂದೂಗಳು ಎಂದು ಹೇಳಬಾರದು. ಇನ್ನು ಕೆಲವರಿಗೆ ಲಿಂಗಾಯತ ಹಿಂದೂ ಎನ್ನಬಾರದು. ಇಂದು ಸಭೆ ನಡೆಯುವ ಬಗ್ಗೆ ಯಾವುದೇ ನೋಟಿಸ್‌ ಸಹ ನೀಡಿಲ್ಲ. ಪಂಚಮಸಾಲಿ ಮಠ 12 ಜನರ ಮಠ ಅಲ್ಲ. ಈ ನಿರ್ಧಾರದಿಂದ ನನಗೆ ಯಾವುದೇ ಆತಂಕ ಇಲ್ಲ ಎಂದು ಹೇಳಿದರು. 

ಸರ್ಕಾರದಿಂದ ಬಂದ ಅನುದಾನದ ಲೆಕ್ಕ ನೀಡುವಂತೆ ಭಕ್ತರು ಕೇಳಿದ್ದರು. ತಮ್ಮ ಮೇಲೆ ಬಂದ ಆರೋಪಕ್ಕೆ ಈಗ ನಮ್ಮನ್ನು ಹೊರಹಾಕಿದ್ದಾರೆ. ಪಂಚಮಸಾಲಿ ಸಮಾಜವೇ ನನ್ನ ಶ್ವಾಸ. ಸಮಾಜದ ಜನ ಹೇಳಿದಂತೆ ಕೇಳುತ್ತೇನೆ ಎಂದರು.

ಪೀಠಕ್ಕೆ ಬಂದ ಮೇಲೆ ಭಕ್ತರ ಮನೆಗೆ ಹೋಗಬೇಕು ಎನ್ನುವ ಕನಸು ಕಂಡಿದ್ದೆ. ಆದರೆ ವ್ಯವಸ್ಥಿತವಾಗಿ ಹರಿಹರ, ದಾವಣಗೆರೆಗೆ ಹೋಗದಂತೆ ನೋಡಿಕೊಳ್ಳಲಾಗಿತ್ತು. ಮಠದಲ್ಲಿ ಬಸವಣ್ಣನವರ ಫೋಟೋ ಹಾಕಲು ಸಹ ಬಿಟ್ಟಿರಲಿಲ್ಲ ಎಂದು ದೂರಿದರು.