
ಚುನಾವಣೆಯಲ್ಲಿ ಗೆದ್ದ ಬಳಿಕವಷ್ಟೇ BJPಯಲ್ಲಿ ಮುಂದೆ ಯಾರು ಮುಖ್ಯಮಂತ್ರಿ ಎಂಬುದು ನಿರ್ಧಾರವಾಗಲಿದೆ: ಯಡಿಯೂರಪ್ಪ
ಹಿರಿಯೂರು: ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಮರಳಿದ ಬಳಿಕವಷ್ಟೇ ಮುಂದೆ ಯಾರು ಮುಖ್ಯಮಂತ್ರಿ ಆಗಬೇಕೆಂಬುದನ್ನು ನಿರ್ಧರಿಸಲಾಗುವುದು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಚುನಾವಣಾ ಪ್ರಚಾರ ಮತ್ತು ರೋಡ್ಶೋದಲ್ಲಿ ಭಾಗವಹಿಸುವ ಸಲುವಾಗಿ ಚಿತ್ರದುರ್ಗದ ಹಿರಿಯೂರಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ನಮ್ಮ ನಿರೀಕ್ಷೆಗೂ ಮೀರಿ BJP ಪರ ಅಲೆ ಇದೆ. 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ BJP ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಚುನಾವಣೆಯಲ್ಲಿ ಗೆದ್ದು ಈ ಬಾರಿ ಅಧಿಕಾರಕ್ಕೆ ಬಂದ ನಂತರವಷ್ಟೇ ಮುಂದಿನ ಮುಖ್ಯಮಂತ್ರಿ ಯಾರೆಂಬ ತೀರ್ಮಾನ ಆಗಲಿದೆ ಎಂದರು.
ಚುನಾವಣೆಗೂ ಮುನ್ನವೇ ಕಾಂಗ್ರೆಸ್ನಲ್ಲಿ ‘ನಾನೇ ಸಿಎಂ’ ಎಂಬುದಾಗಿ ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದ ಅವರು, ಕೆಲವರು ಮುಂದಿನ ಮುಖ್ಯಮಂತ್ರಿ ನಾವೇ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಡಿಕೆ ಶಿವಕುಮಾರ್, ಸಿದ್ಧರಾಮಯ್ಯಗೆ ಪರೋಕ್ಷ ಟಾಂಗ್ ನೀಡಿದರು.
ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಮೋದಿಗೆ ರಾಹುಲ್ ಗಾಂಧಿ ಯಾವ ರೀತಿಯಲ್ಲೂ ಸರಿಸಮ ಅಲ್ಲ ಎಂದು ಯಡಿಯೂರಪ್ಪ ಹೇಳಿದರು.