ಕಟಪಾಡಿ: ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಬಿಜೆಪಿ ಪರ ಮತ ಯಾಚಿಸಿದ ಸಚಿವ ಅಮಿತ್ ಶಾ

ಕಟಪಾಡಿ: ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಬಿಜೆಪಿ ಪರ ಮತ ಯಾಚಿಸಿದ ಸಚಿವ ಅಮಿತ್ ಶಾ

ಕಾಪು: ಕೇಂದ್ರ ಗೃಹ ಹಾಗು ಸಹಕಾರ ಸಚಿವ ಅಮಿತ್ ಶಾ ಶಾವಿವಾರ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಕಟಪಾಡಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿ ಬಿಜೆಪಿ ಪರ ಮತ ಯಾಚಿಸಿದ್ದಾರೆ.

ಸಂತ ಮಧ್ವಾಚಾರ್ಯ ಸಂಸ್ಥಾಪಿತ ಉಡುಪಿಯ ಮಠಗಳು ಮತ್ತು ದೇವಾಲಯವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಅಮಿತ್ ಶಾ, ಕೊಲ್ಲೂರು ದೇವಾಲಯ, ಶ್ರೀ ಲಕ್ಷ್ಮೀ‌ ಜನಾರ್ದನ ದೇವಾಲಯಗಳನ್ನು ಪ್ರಸ್ತಾಪಿಸಿ ಪರಶುರಾಮ ಸೃಷ್ಟಿಯ ಭಾಗವಾಗಿರುವ ಕಾಪುವನ್ನು ಮಹಾನ್ ಪುಣ್ಯ ಭೂಮಿ ಎಂದೂ ಬಣ್ಣಿಸಿದರು.



ಡಾ.ವಿ.ಎಸ್.ಆಚಾರ್ಯ ಅವರು ಈ ಭಾಗದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಕಾಂಗ್ರೆಸ್ ವಿರುದ್ಧ ತಮ್ಮ ‌ವಾಗ್ದಾಳಿಯನ್ನು ಮುಂದುವರಿಸಿದ ಅಮಿತ್ ಶಾ, ಕಾಂಗ್ರೆಸ್ಸಿನಿಂದ ದೇಶದ ಸುರಕ್ಷೆಗೆ ಅಪಾಯವಿದೆ. ಅದು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತದೆ ಎಂದು ದೂಷಿಸಿದರು.

ಕರ್ನಾಟಕವನ್ನು ಬಿಜೆಪಿ ಸುರಕ್ಷಿತವಾಗಿರಿಸುತ್ತದೆ, ಆ‌ ಕೆಲಸ ಇತರರಿಂದ ಸಾಧ್ಯವಿಲ್ಲ. ಪ್ರಧಾನ ಮಂತ್ರಿ ಮೋದಿ ಅವರು ಆತಂಕವಾದಿಗಳ ಬಗ್ಗೆ ಶೂನ್ಯ ಸಹನೆ ಹೊಂದಿದ್ದಾರೆ ಎಂದ ಅವರು,  ರಾಹುಲ್ ಗಾಂಧಿ ಅವರು ಸರಕಾರ ರಚಿಸಿದರೆ ಅದು ರಿವರ್ಸ್ ಗೇರ್ ಸರಕಾರ. ಅದು ಅಭಿವೃದ್ಧಿ ಮಾಡಲಾರದು. ಅಭಿವೃದ್ಧಿಗಾಗಿ ಬಿಜೆಪಿಯ ಡಬ್ಬಲ್ ಇಂಜಿನ್ ಸರಕಾರವನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಸಮಾರಂಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪರವಾಗಿ ಗೃಹ ಸಚಿವರನ್ನು ಶ್ರೀ ನಾರಾಯಣ ಗುರುಗಳ ಪ್ರತಿಮೆ ನೀಡಿ ಸನ್ಮಾನಿಸಲಾಯಿತು. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಭಾರೀ ಬಹುಮತದೊಂದಿಗೆ ಗೆಲ್ಲಿಸುವಂತೆ ಅವರು ಮತದಾರರನ್ನು ಕೋರಿದರು.

ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,  ಅಸಾಧ್ಯ ಎಂದು ಭಾವಿಸಲಾದ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದ ಅಮಿತ್ ಶಾ ದಕ್ಷಿಣದ ಹೆಬ್ಬಾಗಿಲು  ಎನಿಸಿರುವ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಮರಳುವಂತೆ ಮಾಡುವ ನಿಟ್ಟಿನಲ್ಲಿ ಪ್ರಚಾರ ನಿರತರಾಗಿದ್ದಾರೆ ಎಂದರು.

ಕಾಪು ಬಿಜೆಪಿ ಅಭ್ಯರ್ಥಿ  ಸುರೇಶ್ ಶೆಟ್ಟಿ ಮಾತನಾಡಿ ಈ ನಾಡಿನ ಪರಂಪರೆ, ಧರ್ಮ ಗೆಲ್ಲಬೇಕು. ಸಜ್ಜನಿಕೆಯ ರಾಜಕಾರಣ ಗೆಲ್ಲಬೇಕು. ನರೇಂದ್ರ ಮೋದಿ ಅವರ ಸಂಕಲ್ಪ ಗೆಲ್ಲಬೇಕು. ಆದುದರಿಂದ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದರು.

ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್, ಶಾಸಕ ಲಾಲಾಜಿ ಮೆಂಡನ್ ಮಾತನಾಡಿ ಆಪದ್ಬಾಂಧವರಂತಿರುವ ಗುರ್ಮೆಯವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.  ವಿಜೇಂದರ್ ಗುಪ್ತ, ಸಚಿವ ಕೋಟ ನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಉಡುಪಿ ಬಿಜೆಪಿ ಅಭ್ಯರ್ಥಿ ಯಶಪಾಲ್ ಸುವರ್ಣ, ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಕಾಪು ಕ್ಷೇತ್ರದ ಚುನಾವಣಾ ಪ್ರಭಾರಿಗಳಾದ ಸುಲೋಚನಾ ಭಟ್, ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article