
ಏ.8ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಈ ಬಾರಿ ಅಚ್ಚರಿ ಅಭ್ಯರ್ಥಿಗಳು ಕಣಕ್ಕೆ; ಹಲವು ಕಡೆ ಹೊಸ ಪ್ರಯೋಗ: CM ಬಸವರಾಜ ಬೊಮ್ಮಾಯಿ
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರ ಇಂದು, ನಾಳೆ ಸಭೆ ಮಾಡಿ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ. ಏ.8ರಂದು ಕೇಂದ್ರ ಸಮಿತಿ ಪಟ್ಟಿ ಪರಿಶೀಲಿಸಿ ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 3-4 ತಿಂಗಳ ಬೆಳವಣಿಗೆ ಗಮನಿಸಿದರೆ ನಮಗೆ ಬಹುಮತ ಸಿಗುವುದು ಸ್ಪಷ್ಟ. ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ ಎಂದರು.
ಈ ಬಾರಿ ಟಿಕೆಟ್ ಹಂಚಿಕೆ ಸರಳವಾಗಿ ಆಗುತ್ತೆ. ಈ ಬಾರಿಯ ಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದು, ಹಲವು ಕಡೆ ಹೊಸ ಪ್ರಯೋಗ ಮಾಡಲಿದ್ದೇವೆ. ಬೇರೆ ಬೇರೆ ಕಡೆ ಇಂಥ ಪ್ರಯೋಗ ಯಶಸ್ವಿಯಾಗಿದೆ. ಈ ಬಾರಿ ರಾಜ್ಯದಲ್ಲೂ ಅಚ್ಚರಿ ಅಭ್ಯರ್ಥಿ ಹಾಕುತ್ತೇವೆ ಎಂದರು.
ಆಯನೂರು ಮಂಜುನಾಥ್ ಬಂಡಾಯ, ಶಾಸಕರು ಪಕ್ಷ ಬಿಟ್ಟು ಹೋಗುತ್ತಿರುವ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಸೀಟು ಸಿಗುವುದಿಲ್ಲ ಎಂದು ಕೆಲವರು ಬಿಟ್ಟು ಹೋಗಿದ್ದಾರೆ. ಇದರಿಂದ ಬಿಜೆಪಿಯ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.