ಕಡೂರು ಕ್ಷೇತ್ರದಲ್ಲಿ ವೈ.ಎಸ್.ವಿ ದತ್ತ ಬದಲಿಗೆ ಆನಂದ್‌ಗೆ ಕಾಂಗ್ರೆಸ್ ಟಿಕೆಟ್
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಗುರುವಾರ 42 ಅಭ್ಯರ್ಥಿಗಳ ತನ್ನ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಡೂರು ಕ್ಷೇತ್ರದಲ್ಲಿ ವೈ.ಎಸ್.ವಿ ದತ್ತ ಬದಲಿಗೆ ಆನಂದ್‌ಗೆ ಟಿಕೆಟ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣಾ ನೀತಿಸಂಹಿತೆ ಘೋಷಣೆಗೆ ಮುನ್ನವೇ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಲು ನಿರ್ಧರಿಸಿದೆ.
ಮೊದಲ ಹಾಗು ಎರಡನೇ ಪಟ್ಟಿ ಸೇರಿದಂತೆ ಇದುವರೆಗೂ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಇನ್ನೂ 58 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ.
ಜೆಡಿಎಸ್'ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಕೈಹಿಡಿದಿದ್ದ ಎಚ್.ಡಿ ದೇವೇಗೌಡರ ಆಪ್ತರಾಗಿದ್ದ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಅವರ ಹೆಸರು ಪಟ್ಟಿಯಲ್ಲಿಲ್ಲ. ಅವರ ಬದಲಿಗೆ ಕಡೂರು ಕ್ಷೇತ್ರಕ್ಕೆ ಕೆ.ಎಸ್ ಆನಂದ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ.
ಕಡೂರು ಕ್ಷೇತ್ರದಿಂದ JDS ನಿಂದ ಮೊದಲ ಬಾರಿಗೆ 2013ರಲ್ಲಿ ಶಾಸಕರಾಗಿ ಚುನಾಯಿತರಾದ ವೈ.ಎಸ್.ವಿ ದತ್ತಾ, ವಿಧಾನಸಭೆಯಲ್ಲಿ JDS ಶಾಸಕಾಂಗ ಪಕ್ಷದ ಉಪ ನಾಯಕ ಸ್ಥಾನವನ್ನೂ ಅಲಂಕರಿಸಿದ್ದರು.