ನಾವು ತ್ರಿಶೂಲ ಹಿಡಿದು ರಸ್ತೆಗಿಳಿಯದಿದ್ದರೆ ಮುಂದಿನ 5-7 ವರ್ಷಗಳಲ್ಲಿ ಭಾರತ ಮುಸ್ಲಿಂ ರಾಷ್ಟ್ರವಾಗುತ್ತೆ ಎಂದ ಜೈ ಭಗವಾನ್ ಗೋಯಲ್; ದೆಹಲಿ ಪೊಲೀಸರಿಂದ ಪ್ರಕರಣ ದಾಖಲು
ನವದೆಹಲಿ: ನಾವು ತ್ರಿಶೂಲ ಹಿಡಿದು ರಸ್ತೆಗಿಳಿಯದಿದ್ದರೆ ಮುಂದಿನ 5-7 ವರ್ಷಗಳಲ್ಲಿ ಭಾರತವು ಮುಸ್ಲಿಂ ರಾಷ್ಟ್ರವಾಗಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಜೈ ಭಗವಾನ್ ಗೋಯಲ್, ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೆಹಲಿಯಲ್ಲಿ ಯುನೈಟೆಡ್ ಹಿಂದೂ ಫ್ರಂಟ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯ ಹಲವು ಮುಖಂಡರು ಭಾಗವಹಿಸಿದ್ದರು. ಭಗವಾನ್ ಗೋಯಲ್ ಮುಸ್ಲಿಮರ ಬಗ್ಗೆಯೂ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದು, ಎಲ್ಲ ಮುಸ್ಲಿಮರು ಒಂದೇ ಎಂಬ ಕಾರಣಕ್ಕೆ ಯಾವುದೇ ಮುಸಲ್ಮಾನರೂ ಪಿಎಫ್‌ಐ ಅನ್ನು ವಿರೋಧಿಸಿಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ದೆಹಲಿ ಬಿಜೆಪಿ ಖಜಾಂಚಿ ರಾಮ್ ಅವತಾರ್ ಗುಪ್ತಾ ಹಾಗು ಕೇಂದ್ರದ ಮಾಜಿ ಸಚಿವ ಸತ್ಯನಾರಾಯಣ್ ಜಟಿಯಾ ಕೂಡ ಪಾಲ್ಗೊಂಡಿದ್ದರು.
ಇದೇ ವೇಳೆ ಮುಸಲ್ಮಾನರ ಆರ್ಥಿಕ ಬಹಿಷ್ಕಾರಕ್ಕೂ ಕರೆ ನೀಡಿದರಲ್ಲದೆ, ಹಿಂದೂ ರಾಷ್ಟ್ರಕ್ಕಾಗಿ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಹೇಳಿದರು. ಇತ್ತೀಚೆಗೆ, ಧರಮ್ ಸಂಸದ್ ದ್ವೇಷ ಭಾಷಣ ಪ್ರಕರಣದಲ್ಲಿ ಅಸಭ್ಯ ಭಾಷೆ ಬಳಸಿದ ಪ್ರಕರಣದಲ್ಲಿ FIR ಮತ್ತು ಚಾರ್ಜ್‌ಶೀಟ್ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿತ್ತು.