
ಶಿವಮೊಗ್ಗದ ಸೆಂಟ್ರಲ್ ಜೈಲಿನಲ್ಲಿ ಕೊಲೆ ವಿಚಾರಣಾಧೀನ ಖೈದಿ ಆತ್ಮಹತ್ಯೆ; ಜೈಲಿನೊಳಗೆ ಒಂದೇ ವಾರದಲ್ಲಿ ಇಬ್ಬರ ಸಾವು
ಶಿವಮೊಗ್ಗ: ಶಿವಮೊಗ್ಗದ ಸೆಂಟ್ರಲ್ ಜೈಲಿನಲ್ಲಿ ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ಕರುಣಾಕರ ದೇವಾಡಿಗ (23) ಎಂಬ ಯುವಕಜೈಲಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಇತ್ತೀಚೆಗಷ್ಟೇ ಓರ್ವ ವಿಚಾರಣಾಧೀನ ಖೈದಿ ಮೇಲೆ ಹಲ್ಲೆ ನಡೆದಿದ್ದು, ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಇದರ ಬೆನ್ನಲ್ಲೆ ಇದೀಗ ಸೆಂಟ್ರಲ್ ಜೈಲ್ನಲ್ಲಿ ಖೈದಿಯೊಬ್ಬ ನೇಣಿಗೆ ಶರಣಾಗಿದ್ದಾನೆ.
ಕಳೆದ 4 ತಿಂಗಳ ಹಿಂದೆ ಭದ್ರಾವತಿ ನಗರದ ದೇವಸ್ಥಾನದ ಬಳಿ ಅನಾಥ ಅಜ್ಜಿಯ ಬಳಿ ಇದ್ದ ಹಣ ದೋಚಿ, ಬಳಿಕ ಅಜ್ಜಿಯನ್ನು ಮರ್ಡರ್ ಮಾಡಿ ಕರುಣಾಕರ್ ಪರಾರಿಯಾಗಿದ್ದನು. ಅನಂತರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಕೊಲೆ ಪ್ರಕರಣ ಎದುರಿಸುತ್ತಿದ್ದ ಕರುಣಾಕರ್ ಈಗಾಗಲೇ ಓರ್ವ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಬಳಿಕ ಚಿಕ್ಕಮಗಳೂರಿನ ತರಿಕೇರಿಯಲ್ಲಿ ಸಪ್ಲೈಯರ್ ಕೆಲಸ ಮಾಡಿಕೊಂಡಿದ್ದನು ಎಂದು ಹೇಳಲಾಗಿದೆ.
ಭದ್ರಾವತಿ ತಾಲೂಕಿನ ಬಾರಂದೂರಿನ ನಿವಾಸಿಯಾಗಿರುವ ಕರುಣಾಕರ್ ಕಳೆದ 4 ತಿಂಗಳಿನಿಂದ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಶಿಕ್ಷೆಯನುಭವಿಸುತ್ತಿದ್ದ, ಇದೀಗ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.