
ಕುಡಿತದ ಚಟದಿಂದ ಬೇಸತ್ತು ಪತಿಯನ್ನು ಬಿಟ್ಟುಹೋದ 11 ಮಂದಿ ಪತ್ನಿಯರು: ಕುಡಿಯಲು ಬಿಡಲಿಲ್ಲ ಎಂಬ ಕಾರಣಕ್ಕೆ 12ನೇ ಪತ್ನಿಯ ಗತಿ ಏನಾಯಿತು ನೋಡಿ...!
ಜಾರ್ಖಂಡ್: 50 ವರ್ಷ ವಯಸ್ಸಿನ ಮದ್ಯ ವ್ಯಸನಿಯೊಬ್ಬ ಮದ್ಯ ಸೇವಿಸಲು ಬಿಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ತನ್ನ 12ನೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೊಕಾರೋ ಜಿಲ್ಲೆ ಗಿರಿಧ್ ಎಂಬಲ್ಲಿನ ತಾರಾಪುರ ಗ್ರಾಮದಲ್ಲಿ ನಡೆಸಿದೆ.
ಹತ್ಯೆ ಮಾಡಿದ ಆರೋಪಿಯನ್ನು ರಾಮ ಚಂದ್ರ ತುರಿ ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಿಪರೀತ ಕುಡಿತದ ಚಟವಿದ್ದ ಈತ, ಗಲಾಟೆ, ಹಲ್ಲೆ ನಡೆಸುತ್ತಿದ್ದ ಕಾರಣದಿಂದ ಈ ಹಿಂದೆ ಈತನನ್ನು ಮದುವೆಯಾಗಿದ್ದ 11 ಪತ್ನಿಯರೂ ವಿಚ್ಛೇದನ ನೀಡಿ ದೂರವಾಗಿದ್ದು, 12ನೇ ಪತ್ನಿ ಮದ್ಯ ಸೇವಿಸಲು ಬಿಡಲಿಲ್ಲ ಎಂಬ ಕಾರಣಕ್ಕೆ ಈಗ ಹತ್ಯೆಗೀಡಾಗಿದ್ದಾಳೆ.
ಈತ 20 ವರ್ಷಗಳ ಹಿಂದೆ ಸಾವಿತ್ರಿ ದೇವಿ ಎಂಬ ಮಹಿಳೆಯನ್ನು ಮದುವೆಯಾಗಿದ್ದು, ಈ ದಂಪತಿಗೆ 4 ಮಕ್ಕಳಿದ್ದಾರೆ. ಈ ಪೈಕಿ ದೊಡ್ಡ ಮಗ ಹೈದರಾಬಾದ್‌ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರೆ, ಇನ್ನು ಮೂವರು ಮಕ್ಕಳು ಸ್ವಗ್ರಾಮದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ತನ್ನ 40 ವರ್ಷದ ಪತ್ನಿಯನ್ನು ಆರೋಪಿ ರಾಮ ಚಂದ್ರ ತುರಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.