ಮಂಗಳೂರು ಉತ್ತರದಲ್ಲಿ ಮತಭೇಟೆಗಿಳಿದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ; ಕಾಂಗ್ರೆಸ್ ತತ್ವ-ಸಿದ್ಧಾಂತವನ್ನು ಮೆಚ್ಚಿ 'ಕೈ'ಹಿಡಿದ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು
ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ತತ್ವ-ಸಿದ್ಧಾಂತವನ್ನು ಮೆಚ್ಚಿ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಪಕ್ಷ ಸೇರ್ಪಡೆಗೊಂಡರು.
ಬಡಗ ಎಡಪದವು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೊಹಿದ್ದೀನ್ ಬಾವ ಅವರ ನಿವಾಸದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಬೆಲೆಯೇರಿಕೆ ಸಮಸ್ಯೆಗೆ ಕಾಂಗ್ರೆಸ್ ಗ್ಯಾರಂಟಿಗಳು ಹೇಗೆ ಪರಿಹಾರವಾಗಲಿವೆ ಎಂಬುದನ್ನು ಇನಾಯತ್ ಅಲಿ ವಿವರಿಸಿದರು.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬದಲಾವಣೆ ಕ್ಷಣಗಳು ಆರಂಭವಾಗಿದ್ದು, ಜನಪರ ಆಡಳಿತ ನೀಡಿರುವ ಕಾಂಗ್ರೆಸ್ ಪಕ್ಷವು ಕ್ಷೇತ್ರದ ಜನರ ವಿಶ್ವಾಸವನ್ನು ಗೆಲ್ಲುತ್ತಿದೆ. ಜನರ ಜೀವನ ಸುಧಾರಣೆಗೆ ಕಾಂಗ್ರೆಸ್ ಗ್ಯಾರಂಟಿಗಳು ನೆರವಾಗಲಿದ್ದು, ಉತ್ತಮ ನಾಳೆಗಾಗಿ ಜನರು ಕಾಂಗ್ರೆಸ್ ಪಕ್ಷದ ಮೇಲೆ ಒಲವು ತೋರುತ್ತಿರುವುದೇ ನಮ್ಮ ಗೆಲುವಿನ ಸಂಕೇತ ಎಂದು ಈ ವೇಳೆ ಇನಾಯತ್ ಅಲಿ ಹೇಳಿದರು.
ಈ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಪದ್ಮನಾಭ, ಸಂತೋಷ, ಶ್ರೀನಾಥರಿಗೆ ಶುಭ ಕೋರಿ ಇನಾಯತ್ ಅಲಿ ಪಕ್ಷಕ್ಕೆ ಸ್ವಾಗತಿಸಿದರು.
ಕೈಕಂಬದಲ್ಲಿ ಪಕ್ಷ ಸೇರ್ಪಡೆ...
ಕೈಕಂಬದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಶುಕ್ರವಾರ ಲಕ್ಷ್ಮೀ ಶಾ, ಅಮರ್ ಕಾಟಿಪಳ್ಳ, ಪರೀಕ್ಷಿತ್ ಸೇರಿದಂತೆ ಹಲವರು ಮಂದಿ ಇನಾಯತ್ ಅಲಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.
ಬಳಿಕ ಗುರುಪುರದ ಸಲಾಂ ಜುಮ್ಮಾ ಮಸೀದಿ ಹಾಗೂ ನೀರುಮಾರ್ಗದ ಮೊಹಿಯುದ್ದೀನ್ ಜುಮ್ಮಾ ಮಸೀದಿಗೆ ಭೇಟಿ ನೀಡಿ, ಸರ್ವರ ಒಳಿತಿಗಾಗಿ ಪ್ರಾರ್ಥಿಸಿದರು.
ಇದಕ್ಕೂ ಮುನ್ನ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೀರುಮಾರ್ಗದ ಪೆದುಮಲೆ ಪರಿಸರದಲ್ಲಿರುವ ವಾಜುಲ್ಲಾಯಾ ದೈವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗಿಯಾದ ಇನಾಯತ್ ಅಲಿ, ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ವೇಳೆ ಸ್ಥಳೀಯ ಮುಖಂಡರಾದ ಧನ್ವಂತರಿ ನೀರುಮಾರ್ಗ, ಬಿ.ಎಲ್. ಪದ್ಮನಾಭ, ಸುರೇಂದ್ರ ಕಂಬಳಿರವರು ಸೇರಿದಂತೆ ಹಲವರು ಜೊತೆಗಿದ್ದರು.