ಉಡುಪಿ ಸುತ್ತಮುತ್ತ ಬಿರುಸಿನ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್; ಹಲವೆಡೆ ಮತ ಯಾಚನೆ
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಮನೆ ಮನೆ ಪ್ರಚಾರ, ಸಾರ್ವಜನಿಕ ಸಭೆ, ದೇವಸ್ಥಾನ ಭೇಟಿ ಮೂಲಕ ಜನರಲ್ಲಿ ಮತ ಯಾಚಿಸಿದರು.
ಶನಿವಾರ ಉಡುಪಿಯ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ಸಿಬ್ಬಂದಿವರ್ಗದವರನ್ನು ಭೇಟಿಯಾಗಿ ಮತಯಾಚಿಸಿದರು.
ಪಾಳೆಕಟ್ಟೆ ಮೂಕಾಂಬಿಕಾ ಭಜನಾ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಅಲ್ಲಿ ಮತಯಾಚಿಸಿದರು.
ಬಳಿಕ ಕಲ್ಯಾಣಪುರ ಮೂಡುತೋನ್ಸೆಯ ನಿಡಂಬಳ್ಳಿ ಸುವರ್ಣ ನಾಗಬ್ರಹ್ಮ ಮೂಲಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿ ಪ್ರಮೀಳಾ, ಕಡೆಕಾರು ಗ್ರಾಮ ಪಂಚಾಯತಿ ಸದಸ್ಯೆ ಸುಕನ್ಯಾ ಮತ್ತಿತರರು ಉಪಸ್ಥಿತರಿದ್ದರು.
ಅನಂತರ ನಿಟ್ಟೂರು ಬಾಳಿಗ ಫಿಶ್ ನೆಟ್ ಗೆ ಭೇಟಿ ನೀಡಿ ಸಿಬ್ಬಂದಿವರ್ಗದೊಂದಿಗೆ ಮಾತುಕತೆ ನಡೆಸಿದ ಪ್ರಸಾದ್ ರಾಜ್ ಕಾಂಚನ್ ಅವರು, ಉಡುಪಿಯಲ್ಲಿನ ನೀರಿನ ಸಮಸ್ಯೆ ಬಗೆಹರಿಯಬೇಕು, ಹೈಟೆಕ್ ಸರಕಾರಿ ಆಸ್ಪತ್ರೆಯಾಗಬೇಕಾಗಿದೆ. ಇಂದಿನ ಸರಕಾರ ಬಡವರಿಗೆ ವಸತಿ ಸೌಲಭ್ಯ ನೀಡಿಲ್ಲ. ಶಾಲೆಗಳಲ್ಲಿ ಕಟ್ಟುವ ಶುಲ್ಕದ ಪ್ರಮಾಣವೂ ದುಪ್ಪಟ್ಟಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಬಾಳಿಗ ಫಿಶ್ ನೆಟ್ ನ ಜನರಲ್ ಮ್ಯಾನೇಜರ್ ಚಂದ್ರಶೇಖರ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.