ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಮರು ಆರಂಭಿಸಲು ಬಿಡುವುದಿಲ್ಲ: ಕಟಪಾಡಿ ಬಿಜೆಪಿ ಸಮಾವೇಶದಲ್ಲಿ ಅಮಿತ್ ಶಾ
ಕಟಪಾಡಿ: ಶನಿವಾರ ಕಟಪಾಡಿಯಲ್ಲಿ ಬಿಜೆಪಿ ಆಯೋಜಿಸಿದ್ದ ವಿಜಯ ಸಂಕಲ್ಪ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಅಮಿತ್ ಶಾ, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಸ್ಲಿಂ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಮರು ಆರಂಭಿಸಲು ಬಿಡುವುದಿಲ್ಲ, ಇದು ನಮ್ಮ ಸಂಕಲ್ಪ ಎಂದಿದ್ದಾರೆ.
ಜೆಡಿಎಸ್ ಪಕ್ಷವು ಕಾಂಗ್ರೆಸ್ ನ ಬಿ ಟೀಮ್. ಜೆ.ಡಿ.ಎಸ್ ಗೆ ಮತ ನೀಡಿದರೇ ಕಾಂಗ್ರೆಸ್ ಗೆ ಮತ ನೀಡಿದಂತೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್, ಜೆ.ಡಿ.ಎಸ್ ಗೆ ಮತ ನೀಡದೇ ಕಮಲವನ್ನು ಅರಳಿಸಿ ಎಂದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸಿರುವುದು ಎಷ್ಟು ಸರಿ..? ಸೋನಿಯಾ, ಪ್ರಿಯಾಂಕ, ಬಿ.ಕೆ ಹರಿಪ್ರಸಾದ್, ರಾಹುಲ್ ಬಾಬಾ ಸಹಿತ ಅನೇಕರು ಮೋದಿಯವರನ್ನು ನಿಂದಿಸಿದ್ದಾರೆ. ಯಾವಾಗೆಲ್ಲಾ ಮೋದಿಯವರನ್ನು ನಿಂದಿಸಿದ್ದಾರೋ, ಆವಾಗೆಲ್ಲಾ ಬಿಜೆಪಿಯ ಕಮಲವು ಅರಳಿದೆ. ಅದಕ್ಕೆ ಬಿಜೆಪಿಯ ಕಮಲ ಅರಳಿಸುವುದೇ ನಮ್ಮ ಉತ್ತರ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೇ ಭ್ರಷ್ಟಾಚಾರ, ಪಿ.ಎಫ್.ಐ ಸಮರ್ಥನೆ, ವಂಶ ರಾಜಕಾರಣ, ಅಸುರಕ್ಷಿತತೆ ಗ್ಯಾರೆಂಟಿಗಳು ಪ್ರಜೆಗಳಿಗೆ ಲಭಿಸಲಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ವೇದಿಕೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಅಭ್ಯರ್ಥಿಗಳಾದ ಸುರೇಶ್ ಶೆಟ್ಟಿ ಗುರ್ಮೆ, ಯಶ್ಪಾಲ್ ಸುವರ್ಣ, ಶಾಸಕರಾದ ರಘುಪತಿ ಭಟ್, ಲಾಲಾಜಿ.ಆರ್.ಮೆಂಡನ್, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶಾ ನಾಯಕ್ ಪೆರ್ಣಂಕಿಲ, ಗೀತಾಂಜಲಿ ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಗರಾಧ್ಯಕ್ಷ ಮಹೇಶ್ ಠಾಕೂರ್, ಮಹಿಳಾಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ಶಿಲ್ಪಾ.ಜಿ.ಸುವರ್ಣ,ಎಸ್.ಸಿ. ಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ದಿನಕರ್ ಬಾಬು, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್, ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಪಕ್ಷದ ಚುನಾವಣಾ ಉಸ್ತುವಾರಿ ವಿಜಯೇಂದ್ರ ಗುಪ್ತಾ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.