ಪುನೀತ್ ಕೆರೆಹಳ್ಳಿ ಮೇಲೆ ಮತ್ತೊಂದು ಪ್ರಕರಣ ದಾಖಲು; ಕೆರೆಹಳ್ಳಿ ಸೇರಿದಂತೆ ಇತರ ಆರೋಪಿಗಳು 7 ದಿನ ಪೋಲಿಸ್ ಕಸ್ಟಡಿಗೆ
ರಾಮನಗರ: ಜಾನುವಾರು ಸಾಗಾಟ ವೇಳೆ ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ಪುನೀತ್ ಕೆರೆಹಳ್ಳಿ ಮೇಲೆ ಮತ್ತೊಂದು ಹಲ್ಲೆ ಪ್ರಕರಣ ದಾಖಲಾಗಿದೆ.
ಮಾರ್ಚ್ 20 ರಂದು ಬೆಂಗಳೂರಿನ ಹೊರವಲಯದ ಹೊಸೂರು ರಸ್ತೆಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಅಲೀಮುಲ್ಲಾ ಬೇಗ್ ಎಂಬ 30 ವರ್ಷದ ಯುವಕನ ಮೇಲೆ ಪುನೀತ್ ಕೆರೆಹಳ್ಳಿ ಹಾಗು ಆತನ ಮೂವರು ಸಹಚರರು ಸ್ಟನ್ ಗನ್ ನಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದರು ಎಂದು ದೂರು ನೀಡಲಾಗಿದೆ.
ಅಲೀಮುಲ್ಲಾ ನೀಡಿರುವ ದೂರಿನ ಆಧಾರದ ಮೇಲೆ, ಏಪ್ರಿಲ್ 6 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ಹಲ್ಲೆ, ಅಕ್ರಮ ತಡೆ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.
ದಾಖಲಾಗಿರುವ FIRನ ಪ್ರಕಾರ, ಅಲೀಮುಲ್ಲಾ ಅವರನ್ನು ತಮಿಳುನಾಡಿನ ಕೃಷ್ಣಗಿರಿಗೆ ದನಗಳನ್ನು ಸಾಗಿಸುವ ಕೆಲಸಕ್ಕೆ ನಿಯೋಜಿಸಲಾಗಿದ್ದು, ಅವರನ್ನು ಪುನೀತ್ ಕೆರೆಹಳ್ಳಿ ಮತ್ತು ಅವರ 3 ಮಂದಿ ಸಹಚರರಾದ ಸಂತೋಷ್, ಚೇತನ್ ಹಾಗು ದೀಪಕ್ ಅವರು ನೈಸ್ ರಸ್ತೆಯಲ್ಲಿ ಬಲವಂತವಾಗಿ ತಡೆದಿದ್ದಾರೆ. ಪುನೀತ್ ಹಾಗು ಆತನ ಸಹಚರರು ವಾಹನದ ಚಾಲಕ ರಫೀಕ್ ಅವರ ಮೇಲೆ ಮೊದಲು ಹಲ್ಲೆ ನಡೆಸಿದ್ದು, ಬಳಿಕ ವಿದ್ಯುತ್ ಶಾಕ್ ನೀಡಲು ಸ್ಟನ್ ಗನ್ ಅನ್ನು ಬಳಸಿದ್ದಾರೆ ಎಂದು ದೂರಲಾಗಿದೆ.
ಜಾನುವಾರು ವ್ಯಾಪಾರಿ ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಸೇರಿದಂತೆ ಇತರೆ 5 ಆರೋಪಿಗಳಿಗೆ 7 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ಕನಕಪುರ JMFC ನ್ಯಾಯಾಲಯ ರವಿವಾರ ಆದೇಶ ಹೊರಡಿಸಿದೆ.
ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಂಘಪರಿವಾರದ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು 5 ಮಂದಿ ಸಹಚರರನ್ನು ರವಿವಾರ ಬೆಳಗ್ಗೆ ರಾಜಸ್ಥಾನದಿಂದ ಬಂಧಿಸಿ ರಾಮನಗರಕ್ಕೆ ಕರೆತಂದಿದ್ದು, ಬಳಿಕ ಪೊಲೀಸರು ಆರೋಪಿಗಳನ್ನು ಕನಕಪುರ JMFCಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು 7 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ.