
ಬಿಜೆಪಿಯ ಮೊದಲ ಪಟ್ಟಿ ಇಂದು ಬಿಡುಗಡೆ ಸಾಧ್ಯತೆ; ಕೆಲವು ಶಾಸಕರನ್ನು ಕೈಬಿಡಲು ನಿರ್ಧಾರ!
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬೆನ್ನಲ್ಲೇ ಇದೀಗ ಆಡಳಿತಾರೂಢ ಬಿಜೆಪಿಯು ಇಂದು ತನ್ನ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ರವಿವಾರ ಸಂಜೆ ದೆಹಲಿಯಲ್ಲಿ ಸುಮಾರು 2 ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ನೇತೃತ್ವದಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಡಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಬಿಜೆಪಿಯಲ್ಲಿ ಈ ಬಾರಿ 75 ವರ್ಷ ವಯಸ್ಸಾದವರಿಗೆ ಟಿಕೆಟ್ ನೀಡಬೇಕೆ ಅಥವಾ ಬೇಡವೇ? ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಟಿಕೆಟ್ ನೀಡಬೇಕೇ ಅಥವಾ ಗೆಲುವಿನ ಸಾಧ್ಯತೆ ನೋಡಿ ಸಡಿಲಿಕೆ ಮಾಡಬೇಕೇ? ಆಡಳಿತ ವಿರೋಧಿ ಅಲೆ ಹಿನ್ನೆಲೆಯಲ್ಲಿ ಹಲವು ಹಾಲಿ ಶಾಸಕರನ್ನು ಕೈಬಿಡಬೇಕೇ ಅಥವಾ ಅವರಿಗೇ ಮಣೆ ಹಾಕಬೇಕೆ ಎಂಬಿತ್ಯಾದಿ ಅಂಶಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ಸಾಧ್ಯವಾಗದ ಕಾರಣ, ಈ ಗೊಂದಲಗಳಿಗೆ ಸೋಮವಾರ ಪರಿಹಾರ ಕಂಡುಕೊಂಡ ಬಳಿಕ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಗುಜರಾತ್ ರಾಜ್ಯದ ಮಾದರಿಯನ್ನು ಅನುಸರಿಸಿ ಕನಿಷ್ಠ 25 ಮಂದಿ ಹಾಲಿ ಶಾಸಕರನ್ನು ಕೈಬಿಡಲುನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಈ ಶಾಸಕರು ಬಂಡಾಯವೆದ್ದರೆ ಯಾವ ರೀತಿ ರಣತಂತ್ರ ರೂಪಿಸಬೇಕು ಎಂಬ ಕುರಿತು ಕೂಡ ಚರ್ಚೆ ನಡೆದಿದೆ.