ಸಾರ್ವಜನಿಕ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ: 5ನೇ ಗ್ಯಾರಂಟಿ ಘೋಷಿಸಿದ ರಾಹುಲ್ ಗಾಂಧಿ
ಮಂಗಳೂರು: ಈ ಬಾರಿಯ ಚುನಾಣೆಗೆ ಭರ್ಜರಿ ಪ್ರಚಾರ ಕೈಗೊಂಡಿರುವ ಕಾಂಗ್ರೆಸ್ ಗುರುವಾರ ತನ್ನ 5ನೇ ಗ್ಯಾರಂಟಿಯನ್ನು ಘೋಷಣೆ ಮಾಡಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವುದಾಗಿ ಘೋಷಣೆ ಮಾಡಿದ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಈ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದರು.
ಮಂಗಳೂರು ನಗರದ ಹೊರವಲಯದ ಅಡ್ಯಾರ್'ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಚುನಾವಣ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೊದಲ 4 ಗ್ಯಾರಂಟಿ ಯೋಜನೆಗೆ ಸೇರಿ ಈ ಐದೂ ಯೋಜನೆಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡಲಾಗುವುದು ಎಂದರು.
ಈಗಾಗಲೇ ಕಾಂಗ್ರೆಸ್ ಪಕ್ಷ ಗೃಹಜ್ಯೋತಿ - 200 ಯೂನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ - ಪ್ರತಿ ಮನೆ ಯಜಮಾನಿಗೆ ಮಾಸಿಕ 2000 ರೂ., ಅನ್ನಭಾಗ್ಯ- ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ, ಯುವ ನಿಧಿ - ಪದವೀಧರರಿಗೆ 3000 ರೂ ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆ ನೀಡುವ 4 ಘೋಷಣೆಗಳನ್ನು ಮಾಡಿರುವ ಬೆನ್ನಲ್ಲೇ 5ನೇ ಘೋಷಣೆ ಮಾಡಿರುವುದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ತಂದಿದೆ.
ಮೋದಿ ಅವರೇ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಹೇಳುತ್ತಿದ್ದಿರೀ... ಈ ಸಂದರ್ಭದಲ್ಲಿ ನಿಮಗೆ 1 ಸವಾಲು ಹಾಕುತ್ತಿದ್ದೇನೆ, ನಮ್ಮ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ನಾವು ನಮ್ಮ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಅಧಿಕಾರಕ್ಕೆ ಬಂದು 1 ಗಂಟೆಯೊಳಗೆ ನಾವು ಘೋಷಿಸಿದ 5 ಗ್ಯಾರಂಟಿಗಳ ಜಾರಿ ಗ್ಯಾರಂಟಿ. ನಾವು ಈ ಯೋಜನೆಗಳನ್ನು ಜಾರಿ ಮಾಡಿದ ನಂತರ ನೀವು ದೇಶದಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲು ಸಿದ್ಧರಿದ್ದೀರಾ? ಎಂದು ಸವಾಲು ಹಾಕಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ನಾಯಕರಾದ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಎಂ., ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ, ಅಭಯಚಂದ್ರ ಜೈನ್ ಮೊದಲಾದವರು ಉಪಸ್ಥಿತರಿದ್ದರು.