ಬಿಜೆಪಿ ನಡೆಯಿಂದ ಅಸಮಾಧಾನಗೊಂಡ ಫೈಟರ್ ರವಿ; ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
Saturday, April 15, 2023
ಬೆಂಗಳೂರು: ಬಿಜೆಪಿಯೊಳಗೆ ಟಿಕೆಟ್ ವಂಚಿತರ ರಾಜೀನಾಮೆ ಮುಂದುವರಿಯುತ್ತಲೇ ಇದ್ದು, ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ರೌಡಿಶೀಟರ್ ಫೈಟರ್ ರವಿ ಶನಿವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ BJP ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ, ಕಳೆದ 2 ವರ್ಷಗಳಿಂದ ಬಿಜೆಪಿ ಪಕ್ಷವನ್ನು ತಮ್ಮ ಕ್ಷೇತ್ರದಲ್ಲಿ ಬಲಪಡಿಸಲು ಸುತ್ತಾಟ ನಡೆಸುತ್ತಿದ್ದರು.
ಇತ್ತೀಚೆಗೆ ಮೋದಿ ರಾಜ್ಯಕ್ಕಾಗಮಿಸಿದ್ದಾಗ ಅವರಿಗೆ ಕೈಮುಗಿದು ನಿಂತ ಫೋಟೋವೊಂದು ಭಾರೀ ವೈರಲ್ ಆಗಿತ್ತು. ಜೊತೆಗೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಫೈಟರ್ ರವಿಗೆ ಟಿಕೆಟ್ ಪಕ್ಕ ಎಂಬ ಸಂದೇಶವನ್ನು ಸ್ವತಃ BJP ಪಕ್ಷದ ರಾಜ್ಯಾಧ್ಯಕ್ಷರೇ ಹೇಳಿಕೆ ನೀಡಿದ್ದರೆನ್ನಲಾಗಿದೆ. ಆದರೆ ಇದೀಗ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಫೈಟರ್ ರವಿ ಬಿಜೆಪಿ ನಾಯಕರ ನಡೆಯಿಂದ ಅಸಮಾಧಾನಗೊಂಡು ಪಕ್ಷದಿಂದ ಹೊರ ನಡೆದಿದ್ದಾರೆ.