
ಇಂದು ಸಂಜೆ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷ ಸೇರ್ಪಡೆ; ಪರಿಷತ್ತಿಗೆ ರಾಜೀನಾಮೆ
ಬೆಂಗಳೂರು: ಬಿಜೆಪಿ ವಿರುದ್ಧ ಸಮರ ಸಾರಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು KPCC ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸಿಗೆ ಬರುವುದಾದರೆ ಲಕ್ಷ್ಮಣ ಸವದಿಯವರನ್ನು ನಾಯಕರೆಲ್ಲರೂ ಸ್ವಾಗತಿಸುತ್ತೇವೆ. ಲಕ್ಷ್ಮಣ ಸವದಿ ಜೊತೆ ನಾವು ಎಲ್ಲವನ್ನೂ ಚರ್ಚೆ ಮಾಡಿದ್ದು, ಸಂಜೆ 4 ಗಂಟೆಗೆ MLC ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಡಿಕೆಶಿ ಹೇಳಿದರು.
BJP ಕೊಟ್ಟ ಮಾತಿನಂತೆ ನಡೆದಿಲ್ಲ, ಈ ಕಾರಣದಿಂದ ಪಕ್ಷ ತ್ಯಜಿಸುತ್ತಿದ್ದೇನೆ. ಇಂದು ವಿಧಾನಪರಿಷತ್ನ BJP ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಕೇಳಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಅಥಣಿ ಕ್ಷೇತ್ರಕ್ಕೆ ಯೋಜನೆ ರೂಪಿಸುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ನನ್ನ ಕ್ಷೇತ್ರದ ಕಾರ್ಯಕರ್ತರು, ಬೆಂಬಲಿಗರ ಅನುಮತಿ ಪಡೆದಿದ್ದು, ಇಂದು ಸಂಜೆ 4 ಗಂಟೆಗೆ MLC (ಪರಿಷತ್ ಸದಸ್ಯತ್ವ)ಕ್ಕೆ ರಾಜೀನಾಮೆ ನೀಡುವೆ. ಇಂದು ಸಂಜೆ 4.30ಕ್ಕೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ನಾನು ಬೆಳಗಾವಿ ಜಿಲ್ಲೆಗೆ ಸೀಮಿತವಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ, ಬದಲಾಗಿ ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶಕ್ತಿಮೀರಿ ಪ್ರಯತ್ನ ಮಾಡುವೆ, ರಾಜ್ಯದ ಇತರೆ ಭಾಗಗಳಲ್ಲಿ ನನ್ನನ್ನು ಬಳಸಿಕೊಳ್ಳುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ ಎಂದು ಹೇಳಿದರು.