ಬೊಮ್ಮಾಯಿ 40% ಕಮಿಷನ್ ಏಜೆಂಟ್; ದಾಖಲೆ ಬಿಡುಗಡೆ ಮಾಡುತ್ತೇನೆ: ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ ನೆಹರೂ ಓಲೇಕಾರ್
ಹಾವೇರಿ: ಟಿಕೆಟ್ ವಂಚಿತ ಬಿಜೆಪಿ ಹಾಲಿ ಶಾಸಕ ನೆಹರೂ ಓಲೇಕಾರ್, ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಹಾವೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆಹರೂ ಓಲೇಕಾರ್, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸುಮಾರು 1000 ಬೆಂಬಲಿಗರು ಕಾರ್ಯಕರ್ತರು ನನ್ನ ಜೊತೆ ರಾಜೀನಾಮೆ ನೀಡಲಿದ್ದು, JDS ನಿಂದ ಬುಲಾವ್ ಬಂದಿದೆ. ಕಾರ್ಯಕರ್ತರ ನಿರ್ಣಯ ನೋಡಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 40% ಕಮಿಷನ್ ಏಜೆಂಟ್ ಆಗಿದ್ದು, ಬೊಮ್ಮಾಯಿಂದ ಬಿಜೆಪಿಗೆ ದೊಡ್ಡ ಹೊಡತ ಬಿದ್ದಿದೆ. ತನಗೆ ಅನುಕೂಲ ಆಗುವವರಿಗೆ ಟಿಕೆಟ್ ಕೊಡಿಸಿರುವ ಬೊಮ್ಮಾಯಿ, ಅವರ ಕೈ ಚೀಲ ಆದವರಿಗೆ ಟಿಕೆಟ್ ಕೊಡಿಸಿದ್ದಾರೆ ಎಂದು ಆರೋಪ ಮಾಡಿದರು.
ಬೊಮ್ಮಾಯಿಯನ್ನು ಏಕವಚನದಲ್ಲಿ ಸಂಭೋಧಿಸಿದ ಓಲೇಕಾರ್, ಅವನ ಕ್ಷೇತ್ರದಲ್ಲಿ ನೀರಾವರಿಗೆ 1500 ಕೋಟಿ ರೂ. ಖರ್ಚು ಮಾಡಿದ ಯೋಜನೆ ಸಂಪೂರ್ಣ ಹಾಳಾಗಿದೆ. ಇದು ಅವರ ಭ್ರಷ್ಟಾಚಾರ ಸರ್ಕಾರಕಿಡಿದ ಕನ್ನಡಿ. ಇಂಥ ಭಷ್ಟರನ್ನು ಕಡೆಗಾಣಿಸಬೇಕು ಎಂದ ಅವರು, ಬೊಮ್ಮಾಯಿ ಭ್ರಷ್ಟಾಚಾರ ಮಾಡಿದ ದಾಖಲೆ ಬಿಡುಗಡೆ ಮಾಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.