ಉತ್ತರಪ್ರದೇಶದ ಝಾನ್ಸಿಯಲ್ಲಿ ಗ್ಯಾಂಗ್‌ಸ್ಟರ್ ಅತಿಕ್ ಅಹ್ಮದ್ ಪುತ್ರ ಅಸದ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆ
ಲಖನೌ: ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಸಂಸದ, ಗ್ಯಾಂಗ್‌ಸ್ಟರ್ ಅತಿಕ್ ಅಹ್ಮದ್ ನ ಪುತ್ರ ಅಸದ್ ಹಾಗೂ ಆತನ ಸಹಾಯಕ ಗುಲಾಮ್ ನನ್ನು ಉತ್ತರ ಪ್ರದೇಶ ಪೊಲೀಸರು ಝಾನ್ಸಿಯಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.
ಅಸಾದ್ ಅಹ್ಮದ್ ಹಾಗು ಗುಲಾಮ್ ಇಬ್ಬರೂ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದರು. ಫೆಬ್ರವರಿ 24ರಂದು ಪ್ರಯಾಗ್‌ರಾಜ್‌ನ ತಮ್ಮ ಮನೆಯ ಹೊರಭಾಗದಲ್ಲಿ ವಕೀಲ ಉಮೇಶ್ ಪಾಲ್ ಅವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅವರಿಬ್ಬರ ತಲೆಗೂ ತಲಾ 5 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು.
ಈ ಕೊಲೆ ಪ್ರಕರಣದಲ್ಲಿ ಅತೀಕ್ ಅಹ್ಮದ್‌ನನ್ನು ಪ್ರಯಾಗ್‌ರಾಜ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಂದರ್ಭದಲ್ಲಿಯೇ ಆತನ ಮಗನನ್ನು ಎನ್‌ಕೌಂಟರ್'ನಲ್ಲಿ ಹತ್ಯೆ ಮಾಡಲಾಗಿದೆ. ಮಗನನ್ನು ಪೊಲೀಸರು ಎನ್‌ಕೌಂಟರ್ ಮೂಲಕ ಗುಂಡಿಕ್ಕಿ ಕೊಂದಿರುವ ಸುದ್ದಿ ಕೇಳಿ ಕೋರ್ಟ್‌ನಲ್ಲಿಯೇ ಅತೀಕ್ ಅಹ್ಮದ್ ಬಿಕ್ಕಳಿಸಿ ಅತ್ತಿದ್ದಾನೆ. ಇದೇ ವೇಳೆ ನ್ಯಾಯಾಲಯ ಅತೀಕ್ ಅಹ್ಮದ್‌ನನ್ನು ಏಳು ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ.