ಅಧಿಕೃತವಾಗಿ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್; ಬಿಜೆಪಿಗೆ ಗುಡ್ ಬೈ ಹೇಳಿದ ಲಿಂಗಾಯಿತ ಸಮುದಾಯದ ಪ್ರಬಲ ನಾಯಕ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೋಮವಾರ ಅಧಿಕೃತವಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗು ಇತರ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಸುಮಾರು 35 ವರ್ಷಗಳಿಗೂ ಹೆಚ್ಚು ಕಾಲ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶೆಟ್ಟರ್, ಈ ಬಾರಿಯ ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿ ವರಿಷ್ಠರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದ್ದಾರೆ.
ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ಬಿಜೆಪಿಯೊಳಗಿನ ಆಂತರಿಕ ಬೆಳವಣಿಗೆಗಳ ಬಗ್ಗೆ ಹಾಗು ಈಗ ಪಕ್ಶದೊಳಗೆ ನಡೆಯುತ್ತಿರುವ ಬೆಳವಣಿಗಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.
ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿದ್ದು, ಪಕ್ಷ ನರಳಾಡುತ್ತಿದೆ. ಕೆಲ ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಗಾಗಿ ಪಕ್ಷದೊಳಗೆ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯೊಳಗೆ ಲಿಂಗಾಯತ ನಾಯಕರಲ್ಲಿ ಯಡಿಯೂರಪ್ಪ ಬಿಟ್ಟರೆ ನಾನೇ ಹಿರಿಯ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಿರಬೇಕು ಎಂದು ತೀರ್ಮಾನಿಸಿ ನನಗೆ ಟಿಕೆಟ್ ನೀಡದೆ ಹೊರಹೋಗುವಂತೆ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಸೇರ್ಪಡೆ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.