ಬಿಜೆಪಿಗೆ ಕಗ್ಗಂಟಾಗಿರುವ ವಿರೋಧ ಪಕ್ಷದ ನಾಯಕ ಸ್ಥಾನ; ಯಾರಾಗಲಿದ್ದಾರೆ ? ರೇಸಿನಲ್ಲಿ ಯಾರಿದ್ದಾರೆ...?
ಬೆಂಗಳೂರು: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಸರಕಾರ ಕೂಡ ರಚಿಸಿದೆ. ಆದರೆ ವಿರೋಧ ಪಕ್ಷದ ನಾಯಕ ಯಾರು? ಇದು ಕರ್ನಾಟಕದಲ್ಲಿ ಬಿಜೆಪಿಯನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಹೊಸ ಸರ್ಕಾರದ ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾಗಿ ಪರಿಣಮಿಸಿದೆ. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು 4 ದಿನಗಳಾದರೂ, ವಿರೋಧ ಪಕ್ಷದ ನಾಯಕರು ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಬಿಜೆಪಿಯಲ್ಲಿ ಉತ್ತರ ಸಿಕ್ಕಿಲ್ಲ.
ಚುನಾವಣಾ ಫಲಿತಾಂಶ ಬಂದು 10 ದಿನಗಳು ಕಳೆದಿವೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಈಗಾಗಲೇ ವಿಳಂಬವಾಗಿದೆ. ವಿಪಕ್ಷ ನಾಯಕ, ಉಪನಾಯಕ ಮತ್ತು ಸಚೇತಕನ ಆಯ್ಕೆಯಲ್ಲೂ ಜಾತಿ ರಾಜಕಾರಣ ಕೆಲಸ ಮಾಡುತ್ತಿದೆಯೇ? ಹೈಕಮಾಂಡ್ ನಿರ್ಣಯವೇ ಅಂತಿಮವೇ? ಅಲ್ಲದೆ ನಾಯಕರ ಸ್ಥಾನವನ್ನು ತುಂಬಲು ಯಾವೆಲ್ಲ ಲೆಕ್ಕಾಚಾರಗಳು ಮುಖ್ಯವಾಗುತ್ತವೆ ಎನ್ನುವ ಕುತೂಹಲ ರಾಜ್ಯದ ಜನತೆಯಲ್ಲಿ ಮೂಡಿದೆ.
ಚುನಾವಣೆಯಲ್ಲಿ ಹಲವು ಘಟಾನುಘಟಿ ನಾಯಕರ ಸೋಲಿಂದ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಇದೇ ಆಘಾತದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿ ಇನ್ನೂ ಯಾರ ಹೆಸರನ್ನು ಸೂಚಿಸಿಲ್ಲ. ಅದರಲ್ಲೂ ಸದನದಲ್ಲಿ ಆಡಳಿತ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಹಾಕುವ ಯಾವ ನಾಯಕರು ಇಲ್ಲದಂತಾಗಿದೆ.
ರೇಸ್‍ನಲ್ಲಿ ಯಾರಿದ್ದಾರೆ?
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ಮುಖಂಡ ಸುನೀಲ್ ಕುಮಾರ್ ಹಾಗೂ ಬಸವನ ಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ವಿಪಕ್ಷ ನಾಯಕನ ಸ್ಥಾನದ ರೇಸ್‍ನಲ್ಲಿವೆ. ಉಪನಾಯಕನ ಸ್ಥಾನಕ್ಕೆ ಮಾಜಿ ಸಚಿವ ಆರ್.ಅಶೋಕ್, ಅಶ್ವತ್ಥ್ ನಾರಾಯಣ್ ಮತ್ತು ಅರವಿಂದ ಬೆಲ್ಲದ್ ಹೆಸರು ಕೇಳಿ ಬಂದಿವೆ.
ವಿಪಕ್ಷ ಮುಖ್ಯ ಸಚೇತಕನ ಸ್ಥಾನಕ್ಕೆ ಅಭಯ್ ಪಾಟೀಲ್ ಹಾಗೂ ಸತೀಶ್ ರೆಡ್ಡಿ ಅವರ ಹೆಸರು ಕೇಳಿಬಂದಿದೆ. ಅಲ್ಲದೆ ವಿಪಕ್ಷ ನಾಯಕನ ಸ್ಥಾನ ಲಿಂಗಾಯತರಿಗೆ, ಉಪನಾಯಕನ ಸ್ಥಾನ ಒಕ್ಕಲಿಗರಿಗೆ ಹಾಗೂ ಸಚೇತಕನ ಸ್ಥಾನ ಒಬಿಸಿಗೆ ನೀಡಲು ಚರ್ಚೆ ನಡೆಸಲಾಗುತ್ತಿದೆ.