ಅಚ್ಚರಿಯ ಬೆಳವಣಿಗೆಯ ಮಧ್ಯೆ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಯುಟಿ ಖಾದರ್ ಆಯ್ಕೆ; ಇಂದು ನಾಮಪತ್ರ ಸಲ್ಲಿಕೆ

ಅಚ್ಚರಿಯ ಬೆಳವಣಿಗೆಯ ಮಧ್ಯೆ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಯುಟಿ ಖಾದರ್ ಆಯ್ಕೆ; ಇಂದು ನಾಮಪತ್ರ ಸಲ್ಲಿಕೆ

ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸೋಮವಾರ ತಡರಾತ್ರಿ ಮಾಜಿ ಸಚಿವ ಯು.ಟಿ. ಖಾದರ್ ಅವರನ್ನು ವಿಧಾನಸಭಾಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಿದೆ. 

ಅದರಂತೆ ಇಂದು ಬೆಳಿಗ್ಗೆ 11 ಗಂಟೆಗೆ ಸಭಾಧ್ಯಕ್ಷ ಸ್ಥಾನಕ್ಕೆ ಯುಟಿ ಖಾದರ್ ನಾಮಪತ್ರ ಸಲ್ಲಿಸಲಿದ್ದು, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಮೇ 24 ರಂದು ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಮಂಗಳವಾರ ಮಧ್ಯಾಹ್ನ 12ರ ಒಳಗೆ ಸ್ಪೀಕರ್ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಬೇಕಾಗುತ್ತದೆ ಎಂದು ವಿಧಾನಸಭೆ ಬುಲೆಟಿನ್  ಹೊರಡಿಸಿದೆ. 

ಮೂರು ದಿನಗಳ ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಸೋಮವಾರದಂದು 224 ಶಾಸಕರ ಪೈಕಿ 182 ಶಾಸಕರಿಗೆ ಹಂಗಾಮಿ ಸ್ಪೀಕರ್ ಆಗಿರುವ ಹಿರಿಯ ನಾಯಕ ಆರ್‌ವಿ ದೇಶಪಾಂಡೆ ಪ್ರಮಾಣ ವಚನ ಬೋಧಿಸಿದರು.

ದೇಶಪಾಂಡೆ ಅವರನ್ನು ಸ್ಪೀಕರ್ ಹುದ್ದೆಯನ್ನು ನಿಭಾಯಿಸಲು ಕೇಳಲಾಯಿತು. ಆದರೆ, ಅವರು ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಹುದ್ದೆಯನ್ನು ನಿರಾಕರಿಸಿದರು. ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಚ್‌ಕೆ ಪಾಟೀಲ್ ಅವರನ್ನು ಕೂಡ ಸ್ಪೀಕರ್ ಹುದ್ದೆಗೆ ಪಕ್ಷ ಪರಿಗಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರನ್ನೂ ಸಂಪರ್ಕಿಸಲಾಗಿತ್ತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಸ್ಪೀಕರ್ ಆಯ್ಕೆಯಲ್ಲಿ ಪಕ್ಷವು ನಿರ್ಧಾರಕ್ಕೆ ಬರಲು ಸಹಾಯ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ಬಸವರಾಜ ರಾಯರೆಡ್ಡಿ, ಮಧುಗಿರಿಯ ಶಾಸಕರಾದ ಕೆ.ಎನ್. ರಾಜಣ್ಣ, ಮೊಳಕಾಲ್ಮೂರಿನ ಎನ್.ವೈ. ಗೋಪಾಲಕೃಷ್ಣ ಅವರ ಮನವೊಲಿಸಲು ಪಕ್ಷದ ನಾಯಕತ್ವ ಯತ್ನಿಸಿ ವಿಫಲವಾಯಿತು. ಮೂರು ದಿನಗಳ ವಿಧಾನಮಂಡಲದ ಅಧಿವೇಶನ ಬುಧವಾರ ಮುಕ್ತಾಯಗೊಂಡ ನಂತರ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿರುವುದರಿಂದ ಹೆಚ್ಚಿನ ಹಿರಿಯ ಶಾಸಕರು ಕ್ಯಾಬಿನೆಟ್ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article