5 ಗ್ಯಾರಂಟಿ ಯೋಜನೆಗೆ ತಾತ್ವಿಕ ಒಪ್ಪಿಗೆ; ಮುಂದಿನ ಸಂಪುಟ ಸಭೆಯಲ್ಲಿ ಅಧಿಕೃತ ಘೋಷಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೇರಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಯೋಜನೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೊದಲ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ಹೆಚ್ಚಿನ ವಿವರಗಳು ಹಾಗೂ ಗ್ಯಾರಂಟಿಗಳಿಗೆ ಇರುವ ಷರತ್ತುಗಳು ಮತ್ತು ನಿಯಮಗಳನ್ನು ಮುಂದಿನ ಸಭೆಗಳಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆಯಡಿ ಗೃಹಿಣಿಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಲಾಗುವುದು. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳಿಗೆ 3000 ರೂಪಾಯಿ, ನಿರುದ್ಯೋಗಿ ಡಿಪ್ಲೋಮಾ ಪದವೀಧರರಿಗೆ ತಿಂಗಳಿಗೆ 1500 ರೂ. ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.
ಸುದ್ದಿಗೋಷ್ಠಿ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ನ ಗ್ಯಾರಂಟಿಗಳ ವಿರುದ್ಧ ಕಿಡಿಕಾರಿದ್ದರು. ಈ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇ ಆದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಯಾವುದೇ ಆರ್ಥಿಕ ದಿವಾಳಿ ಆಗದಂತೆ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದರು.
ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ, 165. ಭರವಸೆ ಗಳಲ್ಲಿ 158 ಭರವಸೆ ಗಳನ್ನು ಹಿಂದೆ ಈಡೇರಿಸಿದ್ವಿ, ನಾವು ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಭರವಸೆಗಳಲ್ಲದೇ ಇನ್ನೂ 30 ಯೋಜನೆ ಗಳನ್ನು ಜಾರಿ ಮಾಡಿದ್ದೇವು. ಸದ್ಯ 15ನೇ ಹಣಕಾಸು ಆಯೋಗದಲ್ಲಿ 1 ಲಕ್ಷ ಕೋಟಿ ರೂಪಾಯಿ ಬರಬೇಕಿತ್ತು, ಆದರೆ ಹಿಂದಿನ ಸರ್ಕಾರದ ತಪ್ಪಿನಿಂದ 50 ಸಾವಿರ ಸಾವಿರ ಕೋಟಿ ಮಾತ್ರ ಬರಲಿದೆ ಎಂದು ಆರೋಪಿಸಿದರು.
ಕೆಲವು ಇಲಾಖೆಗಳಲ್ಲಿ ತೆರಿಗೆ ಹೆಚ್ಚಾಗಿ ಮಾಡದೆ ಇದ್ದರು ಕೂಡ, ಟಾರ್ಗೆಟ್ ಹೆಚ್ಚು ಮಾಡಲು ಸಾಧ್ಯವಾಗುತ್ತದೆ. ಕೇಂದ್ರದಿಂದ ನಮಗೆ ಅನ್ಯಾಯವಾಗಿದೆ. ಜಿಎಸ್ಟಿ ಸೇರಿ 4 ಲಕ್ಷ ಕೋಟಿ ರೂಪಾಯಿ ಪಾವತಿ ಮಾಡುತ್ತೇವೆ. ಆದರೆ ನಮ್ಮ ಪಾಲನ್ನು ನಮಗೆ ನ್ಯಾಯಯುವಾಗಿ ನಮಗೆ ಕೊಟ್ಟಿಲ್ಲ. ನಮ್ಮ ಪಾಲು ಕೊಡುವುದರಲ್ಲಿ ನಮಗೆ ಅನ್ಯಾಯವಾಗಿದೆ. ಬೊಮ್ಮಾಯಿ ಜಿಎಸ್ಟಿ ಕೌನ್ಸಿಲ್ ಮೆಂಬರ್ ಆಗಿದ್ದರೂ ಕೇಳಲಿಲ್ಲ ಎಂದು ಸಿದ್ದರಾಮಯ್ಯ ವಿವರಿಸಿದರು.