ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರತಿಜ್ಞಾವಿಧಿ ಸ್ವೀಕಾರ: ಲಕ್ಷಾಂತರ ಜನ ಸಾಕ್ಷಿ; ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ
ಬೆಂಗಳೂರು: ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೊಟ್ ಅವರು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅವರಿಗೆ ಪ್ರಮಾಣ ವಚನ ಪ್ರತಿಜ್ಞಾ ವಿಧಿ ಭೋದಿಸಿದರು.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ದೇವರ ಹೆಸರಿನಲ್ಲಿ ಸಿದ್ದರಾಮಯ್ಯ ಪ್ರಮಾಣ ಮಾಡಿದರು.
10 ಮಂದಿ ಪ್ರಮಾಣವಚನ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಇಂದು 8 ಮಂದಿ ಶಾಸಕರಾದ ಎಂ.ಬಿ. ಪಾಟೀಲ್, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ, ನಟ ಕಮಲ್ ಹಾಸನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್, ತಮಿಳುನಾಡು ಸಿಎಂ ಸ್ಟಾಲಿನ್, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ರಮ್ಯಾ, ದುನಿಯಾ ವಿಜಯ್, ನಿಶ್ವಿಕಾ ನಾಯ್ಡು, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಹಾಸ್ಯ ನಟ ಸಾಧು ಕೋಕಿಲ ಸೇರಿದಂತೆ ದೇಶದ ಮೂಲೆಮೂಲೆಗಳಿಂದ ಗಣ್ಯಾತಿಗಣ್ಯರು, ಮುಖ್ಯಮಂತ್ರಿಗಳು, ಸಿನೆಮಾ ನಟರು, ನಟಿಯರು ಆಗಮಿಸಿ ಶುಭ ಹಾರೈಸಿದರು.
ಸ್ಟೇಡಿಯಂ ಮಧ್ಯಭಾಗದಲ್ಲಿ ಸುಮಾರು 40 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದ್ದು, ಸ್ಟೇಡಿಯಂ ಗ್ಯಾಲರಿಯಲ್ಲಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಸ್ಟೇಡಿಯಂ ಒಳಭಾಗದಲ್ಲಿ ಹತ್ತು ಬೃಹತ್ ಎಲ್ಇಡಿ ಅಳವಡಿಸಲಾಗಿದ್ದು, ಸ್ಟೇಡಿಯಂ ಹೊರಗಡೆಯೂ ಎಲ್ಇಡಿ ಪರದೆ ಅಳವಡಿಕೆ ಮಾಡಲಾಗಿತ್ತು.