2000 ರೂ.ನೋಟನ್ನು ನಿಷೇಧಿಸುವುದಿದ್ದರೆ ಅದನ್ನು ಚಲಾವಣೆಗೆ ತಂದಿದ್ದೇಕೆ: ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ
ಬೆಂಗಳೂರು: ಎಲ್ಲಾ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಘೋಷಿಸಿರುವ ಬೆನ್ನಲ್ಲೇ ಆ ನಿರ್ಧಾರದ ವಿರುದ್ಧ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನೋಟನ್ನು ನಿಷೇಧಿಸುವುದಿದ್ದರೆ ಅದನ್ನು ಚಲಾವಣೆಗೆ ತಂದಿದ್ದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
2 ಸಾವಿರ ರೂಪಾಯಿ ನೋಟ್ ಬ್ಯಾನ್ ಮೂಲಕ ನರೇಂದ್ರ ಮೋದಿ ಮತ್ತೊಂದು ನೋಟು ನಿಷೇಧ ಮಾಡಿದ್ದಾರೆ, ಇದು ದುಃಖಕರವಾಗಿದೆ. ಬಿಜೆಪಿ ಸರ್ಕಾರಕ್ಕೆ ತಮ್ಮದೇ ನೀತಿಗಳ ಬಗ್ಗೆ ಸ್ಪಷ್ಟತೆ ಇಲ್ಲ. 2016ರಲ್ಲಿ 2,000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡುವ ಯೋಜನೆ ಇದ್ದರೆ ಅದನ್ನು ಏಕೆ ಪರಿಚಯಿಸಿದರು? ತಮ್ಮ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯ ಹತಾಶ ಪ್ರಯತ್ನ ಇದಾಗಿದೆ ಎಂದು ಕಿಡಿಕಾರಿದ್ದಾರೆ.
ಈಗ ರೂ.2000 ಮೌಲ್ಯದ ನೋಟುಗಳನ್ನು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, 2016ರಲ್ಲಿ ರೂ.500 ಮತ್ತು ರೂ.1000 ನೋಟುಗಳನ್ನು ನಿಷೇಧ ಮಾಡಿದಾಗ ತಿಳಿಸಿದ್ದ ಯಾವ ಉದ್ದೇಶಗಳು ಈಡೇರಿವೆ ಎನ್ನುವುದನ್ನು ದೇಶದ ಜನರಿಗೆ ಮೊದಲು ತಿಳಿಸಬೇಕು.
ರೂ.2000 ಮೌಲ್ಯದ ನೋಟು ನಿಷೇಧಿಸುವುದಿದ್ದರೆ 2016ರಲ್ಲಿ ಅದನ್ನು ಚಲಾವಣೆಗೆ ತಂದದ್ದು ಯಾಕೆ? ಯಾವ ಕಾರಣಕ್ಕಾಗಿ ಈಗ ಇದನ್ನು ನಿಷೇಧಿಸಲಾಗಿದೆ? ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನು ಮೋದಿಯವರು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.