ಕರ್ನಾಟಕದಲ್ಲಿ 'ಕೈ' ಹಿಡಿದ ಮತದಾರ; ಭರ್ಜರಿ ಬಹುಮತದತ್ತ ದಾಪುಗಾಲು; ಬಿಜೆಪಿ ಮತ್ತು ಜೆಡಿಎಸ್ ತೀವ್ರ ಮುಖಭಂಗ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಘೋಷಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕಾಂಗ್ರೆಸ್ ಪಕ್ಷ ಭರ್ಜರಿ ಸ್ಪಷ್ಟ ಬಹುಮತದತ್ತ ದಾಪುಗಾಲಿರಿಸಿದೆ. ಆಡಳಿತರೂಢ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಮುಖಭಂಗಕ್ಕೀಡಾಗಿವೆ.
ಬಿಜೆಪಿ 66 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಎಸ್ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತರರು 4 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳ ನಡುವಿನ ಭಾರಿ ಹಣಾಹಣಿ, ಅಬ್ಬರದ ಪ್ರಚಾರ, ಪ್ರತಿಷ್ಠೆಯನ್ನೇ ಪಣವಾಗಿಟ್ಟು ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 3.67 ಕೋಟಿ ಮತದಾರರು ನೀಡಿರುವ ಜನಾದೇಶ ಇನ್ನು ಕೆಲವೇ ಕ್ಷಣಗಳಲ್ಲಿ ಬಹಿರಂಗವಾಗಲಿದೆ. ಈ ಮೂರು ಪಕ್ಷಗಳ ಜೊತೆಗೇ ಎಎಪಿ, ಬಿಎಸ್ ಪಿ ಮತ್ತು ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಕೂಡ ತಮ್ಮ ಅದೃಷ್ಟಪರೀಕ್ಷೆಗೆ ನಿಂತಿದ್ದಾರೆ.
ಪ್ರಮುಖವಾಗಿ ಲೋಕಸಭೆ ಚುನಾವಣೆಗೆ 1 ವರ್ಷ ಇರುವಾಗ ನಡೆದಿರುವ ಈ ಚುನಾವಣೆಯ ಫಲಿತಾಂಶ ರಾಜ್ಯ ಮಾತ್ರವಲ್ಲ, ದೇಶದ ರಾಜಕೀಯ ದಿಕ್ಕನ್ನು ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದ್ದು, ಈ ಕಾರಣಕ್ಕೆ, ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ.
ವಿಧಾನಸಭೆಯ 224 ಕ್ಷೇತ್ರಗಳ ಪ್ರತಿನಿಧಿಗಳ ಆಯ್ಕೆಗೆ ಬುಧವಾರ (ಏಪ್ರಿಲ್ 10) ಮತದಾನ ನಡೆದಿತ್ತು. 5.07 ಕೋಟಿ ಮತದಾರರಲ್ಲಿ 3.67 ಕೋಟಿ ಮಂದಿ ಮತಚಲಾಯಿಸಿದ್ದರು. 2,615 ಅಭ್ಯರ್ಥಿಗಳು ಕಣದಲ್ಲಿದ್ದು, ಇಂದು ಅವರ ಭವಿಷ್ಯ ಹೊರಬೀಳಲಿದೆ.