
ಸೋಲಿಲ್ಲದ ಸರದಾರನಿಗೆ ಅಭಿನಂದನೆಗಳು...
ಸನ್ಮಾನ್ಯ ಯು.ಟಿ. ಕಾದರ್ ರವರೇ! ನಿಮ್ಮ ಗೆಲುವು ನಿಶ್ಚಿತವಾಗಿತ್ತು. ಸ್ವಲ್ಪ ಆತಂಕವಿದ್ದುದು ಗೆಲುವಿನ ಅಂತರದಲ್ಲಿ ಮಾತ್ರ. ಭರ್ಜರಿ ಅಂತರ ಕಾಯ್ದುಕೊಂಡು ಆ ಆತಂಕವನ್ನೂ ನಿವಾರಿಸಿದ್ದೀರಿ.
ಇತರ ಜಿಲ್ಲೆಗಳ ಮತದಾರರು ಕೋಮು ಜೋಂಪಿನಿಂದ ಮುಕ್ತವಾಗಿ ಪ್ರಾಕ್ಟಿಕಲ್ಲಾಗಿ ಯೋಚಿಸುವ ಬುದ್ಧಿವಂತಿಕೆ ತೋರಿದರೂ ಬುದ್ಧಿವಂತರ ಜಿಲ್ಲೆಯೆಂಬ ( ಅಪ) ಖ್ಯಾತಿಗೊಳಗಾಗಿರುವ ದ.ಕ. ಜಿಲ್ಲೆಯ ಬಹುತೇಕರಿಗೆ ಇನ್ನೂ ಕೋಮು ಅಮಲು ಇಳಿದಿಲ್ಲ. ಅಂತಹ ಜಿಲ್ಲೆಯಲ್ಲಿ ಮುಸ್ಲಿಮ್ ಹಾಗೂ ನೈಜ ಹಿಂದೂ ಬಾಂಧವರು ನಿಮಗೆ ಭರ್ಜರಿ ಗೆಲುವು ತಂದು ಕೊಟ್ಟುದರಲ್ಲಿ ನಿಮ್ಮ ವೈಯಕ್ತಿಕ ವರ್ಚಸ್ಸಿನ ಪಾತ್ರವೂ ಇದೆ.
ಎಲ್ಲರೊಡನೆ ಸಹಜ ನಗುಮುಖದೊಂದಿಗೆ ಒಡನಾಡುವ ನಿಮ್ಮ ಸರಳ, ಸಜ್ಜನಿಕೆ, ಸೇವಾ ವಾಂಛೆ, ಕಳಕಳಿ, ಜಾತ್ಯಾತೀತ ನಿಷ್ಠೆ ನಿಮ್ಮ ' ಸೋಲಿಲ್ಲದ ಸರದಾರ' ಪಟ್ಟವನ್ನು ಭದ್ರವಾಗಿ ಉಳಿಸಿವೆ.
ರಾಜ್ಯದಲ್ಲಿ ಬುದ್ಧಿವಂತ ಮತದಾರರು ಬಿಜೆಪಿಯ ಭ್ರಷ್ಟ ಆಡಳಿತಕ್ಕೆ ಸೂಕ್ತ ತಿರುಗೇಟು ನೀಡಿದಾಗಲೂ ಜನರ ನೆಮ್ಮದಿಗಿಂತ ಕೋಮುಧ್ವೇಷಕ್ಕೇ ಪ್ರಾಧಾನ್ಯ ಕೊಡುತ್ತಿರುವ ದ.ಕ. ಜಿಲ್ಲೆಯಲ್ಲಿ ನೀವು ಮತ್ತು ಪುತ್ತೂರಿನ ಅಶೋಕ್ ರೈ ದ.ಕ. ಜಿಲ್ಲೆಯು ಬಿಜೆಪಿಯ ಭದ್ರಕೋಟೆ ಎಂಬ ಭ್ರಮೆಯ ಬಲೂನಿಗೆ ಸೂಜಿ ಚುಚ್ಚಿ ಠುಸ್ಸ್ ಮಾಡಿದ್ದೀರಿ. ಆದ್ದರಿಂದ ನಿಮಗಿಬ್ಬರಿಗೂ ಕರ್ನಾಟಕದ ಮುದ್ದಿನ ' ಸಿದ್ದು' ತಕ್ಕುದಾದ ಜವಾಬ್ದಾರಿಯುತ ಸ್ಥಾನ ಕೊಡುವುದು ಬಹುತೇಕ ಖಚಿತ.
ಸಚಿವರಾಗಿದ್ದಾಗಲೂ ನಿಮ್ಮ ಸರಳತೆ, ನಿಗರ್ವ, ಸಹಜ ನಡವಳಿಕೆ ಅದ್ಭುತವಾಗಿದೆ. ಅಂದೊಮ್ಮೆ ನೀವು ಸಚಿವರಾಗಿದ್ದಾಗ ಮಂಗಳೂರಲ್ಲಿ ನನ್ನ
" ಮದರಂಗಿ " ಪತ್ರಿಕೆಯ ಕಛೇರಿ ಉದ್ಘಾಟನೆಗೆ ನೀವು ಒಂದು ಸಾಮಾನ್ಯ ಕಾರಿನಿಂದ ಇಳಿದು ಯಾವುದೇ ಪೊಲೀಸ್ ಪ್ರೊಟೆಕ್ಷನ್ ಇಲ್ಲದೆ, ಡಂಗು ಡಾಂಗುರವಿಲ್ಲದೆ ಸಹಜವಾಗಿ ಬಂದು ಆತ್ಮೀಯ ಮಿತ್ರನ ಹಾಗೆ ನನ್ನ ಹೆಗಲ ಮೇಲೆ ಕೈಯಿಟ್ಟ ನೆನಪು ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಇದನ್ನು ಕಂಡ ಸಾಲೆತ್ತೂರು ಅಬೂಬಕರ್ ಫೈಝಿಯವರು;
"ಇವರನ್ನು ಓರ್ವ ಕ್ಯಾಬಿನೆಟ್ ಮಿನಿಸ್ಟರ್ ಎಂದು ನಂಬಲಿಕ್ಕಾಗುವುದಿಲ್ಲ, ಇದೆಂತಹ ಸರಳತೆ!" ಎಂದು ಅಚ್ಚರಿ ವ್ಯಕ್ಯಪಡಿಸಿದ್ದು ನೆನಪಾಗುತ್ತಿದೆ.
ಇನ್ನು ಕೂಡಾ ರಾಜ್ಯದ ಓರ್ವ ಕ್ಯಾಬಿನೆಟ್ ಸಚಿವರಾಗಲಿರುವ ನೀವು ರಾಜ್ಯದ ಮುಸಲ್ಮಾನರ ಹೆಮ್ಮೆಯ ಪುತ್ರನಾಗಿ, ಜಾತ್ಯಾತೀತ ಹಿಂದೂಗಳ ಆತ್ಮೀಯನಾಗಿ ರಾಜಕಾರಣಿಗಳು ಹೇಗಿರಬೇಕೆಂಬುದಕ್ಕೆ ಮಾದರಿಯಾಗಿ ವಿರಾಜಿಸಲಿದ್ದೀರಿ. ಓರ್ವ ಆಪ್ತಮಿತ್ರ ಎಂಬ ನೆಲೆಯಲ್ಲಿ ಇದು ನನ್ನನ್ನು ಸಂತೋಷದ ಅಲೆಯಲ್ಲಿ ತೋಯಿಸುತ್ತಿದೆ.
ನಿಮಗೆ ಆಯುರಾರೋಗ್ಯವಿರಲಿ, ರಾಜಕಾರಣದಲ್ಲಿ ಇನ್ನಷ್ಟು ಉತ್ತುಂಗ ಶಿಖರಕ್ಕೇರಿ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುಬ ಯೋಗವುಂಟಾಗಲಿ ಎಂದು ಪ್ರಾರ್ಥಿಸುತ್ತಾ ಸರ್ವ ವಿಧ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ.
![]() |
- ಡಿ. ಐ. ಅಬೂಬಕರ್ ಕೈರಂಗಳ |