ಮೇ 21ಕ್ಕೆ ದುಬೈಯಲ್ಲಿ ಕನ್ನಡ ಚಿಣ್ಣರ ಚಿಲಿಪಿಲಿ; ಅನಿವಾಸಿ ಕನ್ನಡ ಮಕ್ಕಳ ಕಲಾ ಪ್ರತಿಭಾ ಸ್ಪರ್ಧೆ-ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ
ಅಬುಧಾಬಿ: ಹೆಮ್ಮೆಯ ದುಬೈ ಕನ್ನಡ ಸಂಘದ ವತಿಯಿಂದ ವರ್ಷಪ್ರತಿ ನಡೆಸಿ ಬರುವ ಸಂಯುಕ್ತ ಅರಬ್ ಸಂಸ್ಥಾನದ ಕನ್ನಡ ಮಕ್ಕಳ ಕಲಾ ಪ್ರತಿಭಾ ಸ್ಪರ್ಧೆ ಮತ್ತು ಯುಎಇ ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇದೇ ತಿಂಗಳ 21ರಂದು ಬಿಸ್ನೆಸ್ ಬೇ ಮೆಟ್ರೋ ಸಮೀಪದ ಅಲ್ ಸಫಾದಲ್ಲಿರುವ ಜೆ ಎಸ್ ಎಸ್ ಪ್ರೈವೇಟ್ ಶಾಲೆಯಲ್ಲಿ ನಡೆಸಲಿದ್ದಾರೆ, ಇದು 5ನೇ ಆವೃತ್ತಿಯ ಕಾರ್ಯಕ್ರಮವಾಗಿದ್ದು ಪ್ರವೇಶ ಉಚಿತವಾಗಿರುತ್ತೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕನ್ನಡ ಮಕ್ಕಳಿಗೆ ಹಾಡು,ನೃತ್ಯ, ವಾದ್ಯಸಂಗೀತ ಉಪಕರಣ ನುಡಿಸುವಿಕೆ ಮತ್ತು ಚಿಕ್ಕ ಮಕ್ಕಳಿಗೆ ಚಿತ್ರ ಬಿಡುಸುವಿಕೆ ಸರ್ಧೆಯನ್ನು ಹಾಗೂ ಪಾಶ್ಚಿಮಾತ್ಯ, ಸಾಂಪ್ರದಾಯಿಕ ಫ್ಯಾಷನ್ ಶೋವನ್ನು ಏರ್ಪಡಿಸಿದ್ದಾರೆ ಹಾಗೆ 2022-23ನೇ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ಸಂಯುಕ್ತ ಅರಬ್ ಸಂಸ್ಥಾನದ ಪ್ರತಿಭಾವಂತ ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಚಂದನವನದ ನಟಿ ಸಂಜನಾ ಆನಂದ್, ಸರಿಗಮಪ ಗಾಯಕ ಕಂಬದ ರಂಗಯ್ಯ ಸಂಗೀತ ಸಂಜೆ ರಸದೌತಣ ನೀಡಲಿದ್ದು ಬೆಂಗಳೂರಿನ ರಾಕ್ ಬ್ರೇಕರ್ಸ್ ಡಾನ್ಸ್ ತಂಡವು ನೃತ್ಯ ಮೂಲಕ ರಂಜಿಸಲು ಆಗಮಿಸಲಿದ್ದಾರೆ, ಹಾಗೆ ಅನೇಕ ಟಿವಿ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿರುವ ಮತ್ತು ಧಾರವಾಹಿ ಮತ್ತು ಚಿತ್ರಗಳಲ್ಲಿ ನಟಿಸಿರುವ ಪುಟಾಣಿ ವನ್ಶಿಕಾ ಆನಂದ್ ಸಹ ಆಗಮಿಸಲಿದ್ದು ಅನಿವಾಸಿ ಕನ್ನಡ ಮಕ್ಕಳಿಗೆ ತಮ್ಮ ಚಟಾಕಿ ಮಾತಿನಿಂದ ರಂಜಿಸಲಿದ್ದಾರೆ, ಕಾರ್ಯಕ್ರಮದ ನಿರೂಪಣೆ ಮಾಡಲು ಶಮೀರಾ ಬೆಲ್ವಾಯಿ ಅವರು ಸಹ ಆಗಮಿಸಿ ತಮ್ಮ ವಿಭಿನ್ನ ಶೈಲಿಯ ನಿರೂಪಣೆಯನ್ನು ಮಾಡಲಿದ್ದಾರೆ.
ಕಾರ್ಯಕ್ರಮದ ಕುರಿತ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಕ್ರಮದ ಆಯೋಜಕರಾದ ಹೆಮ್ಮೆಯ ದುಬೈ ಕನ್ನಡ ಸಂಘದ ಅಧ್ಯಕ್ಷರಾದ ಮಧು ದಾವಣಗೆರೆ, ಉಪಾಧ್ಯಕ್ಷರಾದ ಹಾದಿಯ ಮಂಡ್ಯ, ಮುಖ್ಯ ಕಾರ್ಯದರ್ಶಿ ರಫೀಕಲಿ ಕೊಡಗು, ಮಾಜಿ ಅಧ್ಯಕ್ಷರುಗಳಾದ ಸುದೀಪ್ ದಾವಣಗೆರೆ, ಮಮತಾ ರಾಘವೇಂದ್ರ ಮೈಸೂರು ಮತ್ತು ಸಮಿತಿ ಸದಸ್ಯರುಗಳಾದ ಡಾ.ಸವಿತಾ ಮೈಸೂರು, ಅನಿತಾ ಬೆಂಗಳೂರು,ಡಾ.ಸವಿತಾ ಮೈಸೂರು, ಅಕ್ರಮ್ ಕೊಡಗು, ವರದರಾಜ್ ಕೋಲಾರ, ಶಂಕರ್ ಬೆಳಗಾವಿ, ಮೊಹೀನುದ್ದೀನ್ ಹುಬ್ಬಳ್ಳಿ, ವಿಷ್ಣುಮೂರ್ತಿ ಮೈಸೂರು ಹಾಗೂ ಉಪಸಮಿತಿ ಸದಸ್ಯೆ ನಜೀರ ಮಂಡ್ಯ ಉಪಸ್ಥಿತರಿದ್ದರು.