ಗೋಹತ್ಯೆ ವಿರೋಧಿ ಮಸೂದೆ, ಮತಾಂತರ ವಿರೋಧಿ ಮಸೂದೆ ತೆಗೆದುಹಾಕಿ, 4% ಮುಸ್ಲಿಂ ಮೀಸಲಾತಿಯನ್ನು ಮರುಸ್ಥಾಪಿಸಿ: ಸರಕಾರವನ್ನು ಒತ್ತಾಯಿಸಿದ ನಟ ಚೇತನ್ ಅಹಿಂಸ

ಗೋಹತ್ಯೆ ವಿರೋಧಿ ಮಸೂದೆ, ಮತಾಂತರ ವಿರೋಧಿ ಮಸೂದೆ ತೆಗೆದುಹಾಕಿ, 4% ಮುಸ್ಲಿಂ ಮೀಸಲಾತಿಯನ್ನು ಮರುಸ್ಥಾಪಿಸಿ: ಸರಕಾರವನ್ನು ಒತ್ತಾಯಿಸಿದ ನಟ ಚೇತನ್ ಅಹಿಂಸ

ಬೆಂಗಳೂರು: ಕರ್ನಾಟಕದಲ್ಲಿ ನಾಳೆ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಮಧ್ಯೆ ನಟ, ಹೋರಾಟಗಾರ ಚೇತನ್ ಅಹಿಂಸ ಸರ್ಕಾರದ ಮುಂದೆ ಒತ್ತಾಯವೊಂದನ್ನು ಇರಿಸಿದ್ದಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ 5 ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿರುವ ಚೇತನ್ ಅಹಿಂಸಾ, ಈ ಹಿಂದಿನ ಸರ್ಕಾರ ತಂದಿದ್ದ, ಗೋಹತ್ಯೆ ವಿರೋಧಿ ಮಸೂದೆ ಮತ್ತು ಮತಾಂತರ ವಿರೋಧಿ ಮಸೂದೆಯನ್ನು ತೆಗೆದುಹಾಕಬೇಕು ಎಂದಿದ್ದಾರೆ. ಮಾತ್ರವಲ್ಲದೆ ಹಿಂದಿನ ಬಿಜೆಪಿ ಸರ್ಕಾರ ರದ್ದು ಮಾಡಿದ್ದ 4% ಮುಸ್ಲಿಂ OBC ಮೀಸಲಾತಿಯನ್ನು ಮರುಸ್ಥಾಪಿಸಬೇಕು. ಜಾತಿ ಗಣತಿಯನ್ನು ಬಹಿರಂಗಪಡಿಸಬೇಕು. ಪರಿಶಿಷ್ಟ ಪಂಗಡ ಒಳ ಮೀಸಲಾತಿ ಮತ್ತು ಖಾಸಗಿ ವಲಯದ ಮೀಸಲಾತಿಯನ್ನು (ಜಾತಿ/ಪ್ರದೇಶ/ಇತ್ಯಾದಿ) ಜಾರಿಗೊಳಿಸಬೇಕು ಎಂದು ಸಹ ಒತ್ತಾಯಿಸಿದ್ದಾರೆ.

2021 ರಲ್ಲಿ ವಿಧಾನಸಭೆ ಹಾಗೂ ಪರಿಷತ್​ನಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಚರ್ಚೆಯ ಬಳಿಕ ಗೋಹತ್ಯೆ ಕಾಯ್ದೆಯನ್ನು ತರಲಾಗಿತ್ತು. ಆಗಲೂ ಚೇತನ್ ಅಹಿಂಸ ಈ ಕಾಯ್ದೆಯನ್ನು ವಿರೋಧಿಸಿದ್ದರು. ಇನ್ನು ಮತಾಂತರ ನಿಷೇಧ ಕಾಯ್ದೆಯೂ ಸಹ ವಿವಾದ ಹಾಗೂ ಚರ್ಚೆಗೆ ಕಾರಣವಾಗಿತ್ತು. ಮತಾಂತರ ನಿಷೇಧ ಕಾಯ್ದೆಯು ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಚೇತನ್ ಅಹಿಂಸ ಸೇರಿದಂತೆ ಹಲವರು ಆಕ್ಷೇಪವ್ಯಕ್ತಪಡಿಸಿದ್ದರು. ಆದರೆ ಮತಾಂತರಕ್ಕೆ ಒಪ್ಪಿಗೆ ಇದೆ ಆದರೆ ಬಲವಂತದ ಮತಾಂತರಕ್ಕೆ ನಿಷೇಧ ಹೇರುತ್ತಿದ್ದೇವೆ ಎಂದು ಆಡಳಿತ ಸರ್ಕಾರ ವಿವರಣೆ ನೀಡಿತ್ತು.

ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಜಾತಿ ಗಣತಿ ಮಾಡಲಾಗಿತ್ತು. ಆದರೆ ಅವರು ಅದನ್ನು ಬಹಿರಂಗಪಡಿಸಿರಲಿಲ್ಲ. ಆ ಬಳಿಕ ಬಂದ ಬಿಜೆಪಿ ಸರ್ಕಾರವೂ ಸಹ ಜಾತಿ ಗಣತಿ ಬಹಿರಂಗಪಡಿಸಲಿಲ್ಲ. ಜಾತಿ ಗಣತಿಯನ್ನು ಬಹಿರಂಗಪಡಿಸಬೇಕು ಎಂದು ಆಗಿನಿಂದಲೂ ಹಲವರು ಒತ್ತಾಯಿಸುತ್ತಲೇ ಇದ್ದಾರೆ. ಇದೀಗ ಚೇತನ್ ಅಹಿಂಸ ಈ ಬಗ್ಗೆಯೂ ನೂತನ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು ಎಂಬ ಗೊಂದಲ ಏರ್ಪಟ್ಟಿದ್ದ ಬಗ್ಗೆ ನಿನ್ನೆ (ಮೇ 17) ಅಭಿಪ್ರಾಯ ಹಂಚಿಕೊಂಡಿದ್ದ ಚೇತನ್, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಜಟಾಪಟಿ ಎಂದರೆ ಸ್ಪರ್ಧಿಗಳು ಪ್ರಬಲರಾಗಿದ್ದಾರೆ ಎಂದರ್ಥವಲ್ಲ, ಬದಲಿಗೆ, ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಇಂತಹ ಸುದೀರ್ಘ ಪವರ್‌ಪ್ಲೇಗಳು ಇಂದಿನ ಬಿಜೆಪಿಯಲ್ಲಿ ನಡೆಯುವುದಿಲ್ಲ. ಪರಿಪೂರ್ಣ ಮಾದರಿಯಲ್ಲಿ, ಕರ್ನಾಟಕದ ಜನರಿಗೆ ಸಂವೇದನಾಶೀಲ ಮತ್ತು ಬಲವಾದ ಕರ್ನಾಟಕದ ‘ಹೈಕಮಾಂಡ್’ ಅಗತ್ಯವಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ದೆಹಲಿಯ ಹೈಕಮಾಂಡ್ ಅಲ್ಲ ಎಂದಿದ್ದರು.

Ads on article

Advertise in articles 1

advertising articles 2

Advertise under the article