
ಪ್ರತಿಭಟನಾನಿರತ ಕುಸ್ತಿಪಟುಗಳ ಪರ ನಿಂತ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರು; ಯಾರು ಏನೇನು ಹೇಳಿದ್ದಾರೆ ನೋಡಿ...
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅಪ್ರಾಪ್ತ ಹಾಗೂ ಹಲವು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪವಿದೆ.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅನಿಲ್ ಕುಂಬ್ಳೆ, ಮೇ 28 ರಂದು ನಮ್ಮ ಕುಸ್ತಿಪಟುಗಳ ಮೇಲೆ ನಡೆದ ಘಟನೆಯ ಬಗ್ಗೆ ಕೇಳಿ ಬೇಸರವಾಯಿತು. ಸರಿಯಾದ ಮಾತುಕತೆಯ ಮೂಲಕ ಯಾವುದನ್ನಾದರೂ ಪರಿಹರಿಸಬಹುದು. ಆದಷ್ಟು ಬೇಗ ಪರಿಹಾರಕ್ಕಾಗಿ ಆಶಿಸುತ್ತೇನೆ" ಎಂದು ತಿಳಿಸಿದ್ದಾರೆ.
ಮೇ 28 ರಂದು ನೂತನ ಸಂಸತ್ ಭವನದ ಮುಂದೆ ಪ್ರತಿಭಟನೆಗೆ ಮುಂದಾಗಿದ್ದ ಕುಸ್ತಿಪಟುಗಳನ್ನು ಅಮಾನವೀಯವಾಗಿ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ದೇಶಾದ್ಯಂತದಿಂದ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿತ್ತು. ಇದೀಗ ಇದೇ ಘಟನೆಯನ್ನು ಪ್ರಸ್ತಾಪಿಸಿ ಅನಿಲ್ ಕುಂಬ್ಳೆ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು ಅನಿಲ್ ಕುಂಬ್ಳೆಗೂ ಮುನ್ನ ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಕುಸ್ತಿಪಟುಗಳ ಹೋರಾಟವನ್ನು ಪ್ರಸ್ತಾಪಿಸಿ, ಇವರಿಗೆ ಎಂದಾದರೂ ನ್ಯಾಯ ಸಿಗಲಿದೆಯೇ? ಎಂದು ಪ್ರಶ್ನಿಸಿದ್ದರು.
ಹಾಗೆಯೇ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಬೆಂಬಲ ಸೂಚಿಸಿದ್ದರು. ಸಾಕ್ಷಿ, ವಿನೇಶ್ ಭಾರತದ ಹೆಮ್ಮೆ. ದೇಶದ ಹೆಮ್ಮೆಯಾಗಿರುವವರು ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಕಂಡು ನನಗೆ ತುಂಬಾ ನೋವಾಗಿದೆ. ಅವರಿಗೆ ನ್ಯಾಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಭಜ್ಜಿ ಬೆಂಬಲ ವ್ಯಕ್ತಪಡಿಸಿದ್ದರು.
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ್ದ ವೀರೇಂದ್ರ ಸೆಹ್ವಾಗ್, ದುಖಃದ ವಿಷಯ ಎಂದರೆ, ದೇಶದ ಕೀರ್ತಿ ಪಾತಾಕೆಯನ್ನು ಹಾರಿಸಿದ ನಮ್ಮ ಚಾಂಪಿಯನ್ಸ್ ಇಂದು ಬೀದಿಗಿಳಿಯಬೇಕಾಗಿ ಬಂದಿದೆ. ಇದೊಂದು ಸಂವೇದನಾಶೀಲ ವಿಷಯ. ಹೀಗಾಗಿ ನಿಷ್ಪಕ್ಷಪಾತವಾಗಿ ತನಿಖೆಯಾಗಲಿ, ನಮ್ಮ ಕುಸ್ತಿಪಟುಗಳಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದರು.
ಭಾರತೀಯ ಅಥ್ಲೀಟ್‌ಗಳು ನಮಗೆ ಪದಕಗಳನ್ನು ಗೆದ್ದುಕೊಟ್ಟಾಗ ಮಾತ್ರವಲ್ಲ, ಅವರು ನಮ್ಮ ಹೆಮ್ಮೆ ಎಂದು ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದರು.
ಇನ್ನು ಮಹಿಳಾ ಕ್ರಿಕೆಟ್ ಆಟಗಾರ್ತಿ ಶಿಖಾ ಪಾಂಡೆ, ಕುಸ್ತಿಯಾಡಲು ಹೆಚ್ಚಿನ ಶಕ್ತಿ ಬೇಕು. ಆದರೆ ಸತ್ಯವನ್ನು ಮಾತನಾಡಲು ಅದಕ್ಕಿಂತ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಆದಷ್ಟು ಬೇಗ ನ್ಯಾಯ ಸಿಗಲಿ ಎಂದು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂಬಾರ್ಥದಲ್ಲಿ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದರು.
ಅಂದಹಾಗೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅಪ್ರಾಪ್ತ ಹಾಗೂ ಹಲವು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪವಿದೆ. ಈ ಬಗ್ಗೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದರೂ, ಇನ್ನೂ ಕೂಡ ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ. ಅತ್ತ ಕಠಿಣ ಕ್ರಮ ಕೈಗೊಳ್ಳುವಂತೆ ಕುಸ್ತಿಪಟುಗಳು ಪ್ರತಿಭಟನೆ (Wrestlers protest) ಮುಂದುವರೆಸಿದ್ದಾರೆ.
ಇದಾಗ್ಯೂ ಕಠಿಣ ಕ್ರಮ ಜರುಗಿಸುವ ಬಗ್ಗೆ ಸೂಕ್ತ ಭರವಸೆ ಸಿಗದಿರುವ ಕಾರಣ ತಾವು ಗಳಿಸಿದ ಪದಕಗಳನ್ನು ಗಂಗಾ ನದಿಗೆ ಎಸೆಯುವುದಾಗಿ ಕುಸ್ತಿಪಟುಗಳು ತಿಳಿಸಿದ್ದಾರೆ. ಅಲ್ಲದೆ ಇಂಡಿಯಾ ಗೇಟ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.