ಗಂಗಾ ನದಿಗೆ ತಮ್ಮ ಪದಕಗಳನ್ನು ಎಸೆಯುವ ನಿರ್ಧಾರ ಮುಂದೂಡಿ 5 ದಿನ ಡೆಡ್‌ಲೈನ್‌ ನೀಡಿದ ಕುಸ್ತಿಪಟುಗಳು

ಗಂಗಾ ನದಿಗೆ ತಮ್ಮ ಪದಕಗಳನ್ನು ಎಸೆಯುವ ನಿರ್ಧಾರ ಮುಂದೂಡಿ 5 ದಿನ ಡೆಡ್‌ಲೈನ್‌ ನೀಡಿದ ಕುಸ್ತಿಪಟುಗಳು

ದೆಹಲಿ : ಭಾರತೀಯ ಕಸ್ತಿ ಫೆಡರೇಷನ್‌ ಅಧ್ಯಕ್ಷರ ಬಂಧನಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಿರುವ ಕುಸ್ತಿ ಪಟುಗಳು ಗಂಗಾ ನದಿಗೆ ತಮ್ಮ ಪದಕಗಳನ್ನು ವಿಸರ್ಜನೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಮಾತ್ರವಲ್ಲದೇ, ಅಗತ್ಯ ಕ್ರಮಕ್ಕೆ ಮುಂದಾಗುವಂತೆ ಸರಕಾರಕ್ಕೆ ಐದು ದಿನಗಳ ಗಡುವು ನೀಡಿದ್ದಾರೆ.

ಇನ್ನೊಂದೆಡೆ ವಿಶ್ವಮಟ್ಟದ ಕುಸ್ತಿ ಆಡಳಿತ ಸಂಸ್ಥೆಯಾದ ಯುನೈಟೆಡ್‌ ವರ್ಲ್ಡ್‌ ವ್ರೆಸ್ಲಿಂಗ್‌ (UWW) ಭಾರತೀಯ ಕುಸ್ತಿ ಫೆಡರೇಶನ್‌ಗೆ ಈ ಘಟನೆ ಬಗ್ಗೆ ಬೇಸರವ್ಯಕ್ತಪಡಿಸಿ ಎಚ್ಚರಿಕೆ ಸಹ ನೀಡಿದೆ.

ಮಧ್ಯಪ್ರವೇಶಿಸಿ ಮನವೊಲಿಸಿದ ಟಿಕಾಯತ್‌ 

ಹಲವು ದಿನಗಳ ಹೋರಾಟದ ಬಳಿಕ ಬೇಸರಗೊಂಡಿದ್ದ ಕುಸ್ತಿಪಟುಗಳು ಮಂಗಳವಾರ ಸಂಜೆ ತಮ್ಮ ಜೀವನದಲ್ಲಿ ಗಳಿಸಿದ್ದ ಎಲ್ಲಾ ಪದಕಗಳನ್ನು ಗಂಗಾನದಿಗೆ ಬಿಡಲು ಮುಂದಾಗಿದ್ದರು. ಆದರೆ, ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ನರೇಶ್‌ ಟಿಕಾಯತ್‌ ಮಧ್ಯ ಪ್ರವೇಶಿಸಿ ಕ್ರೀಡಾಪಟುಗಳ ಮನವೊಲಿಸಿದರು. ಐದು ದಿನ ಸಮಯ ಕೊಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸುವ ಎಂದು ಭರವಸೆ ನೀಡಿದ ಬಳಿಕ ಪದಕ ವಿಸರ್ಜನೆ ಮಾಡುವ ನಿರ್ಧಾರದಿಂದ ಹೋರಾಟಗಾರರು ಹಿಂದೆ ಸರಿದರು.

ಮನೆಯಿಂದ ಪದಕಗಳನ್ನು ಬ್ಯಾಂಗ್‌ನಲ್ಲಿ ತುಂಬಿಕೊಂಡು ಬಂದಿದ್ದ ಕುಸ್ತಿಪಟುಗಳು

ಅಂತಾರಾಷ್ಟ್ರೀಯ ಕುಸ್ತಿ ಪಟುಗಳಾದ ಬಜರಂಗ್‌ ಪೂನಿಯಾ, ಸಾಕ್ಷಿ ಮಲಿಕ್‌, ವಿನೇಶ್‌ ಫೋಗಟ್‌ ಮೊದಲಾದವರು ಟ್ವೀಟ್‌ ಮಾಡಿ, ಸರಕಾರದ ಧೋರಣೆ ಖಂಡಿಸಿ ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ವಿಸರ್ಜನೆ ಮಾಡುವಾಗಿ ಘೋಷಣೆ ಮಾಡಿದ್ದರು. ಅದಕ್ಕೆ ಪೂರಕವಾಗಿ ಮನೆಯಿಂದ ಪದಕಗಳನ್ನು ಬ್ಯಾಂಗ್‌ನಲ್ಲಿ ತುಂಬಿಕೊಂಡು ಬರುತ್ತಿರುವ ವಿಡಿಯೊ ಹಂಚಿಕೊಂಡಿದ್ದರು. ಹೋರಾಟಗಾರರನ್ನು ಬೆಂಬಲಿಸಿದ ಕೆಲವರು ತಾವು ಪದಕ ವಿಸರ್ಜನೆ ಮಾಡುವುದಾಗಿ ಮುಂದೆ ಬಂದಿದ್ದರು.

ಐದು ದಿನ ಗಡುವು

ಆರು ಗಂಟೆ ಬಳಿಕ ಕುಸ್ತಿಪಟುಗಳ ತಮ್ಮ ಪದಕ ಹಿಡಿದು ಗಂಗಾ ನದಿ ತಟದತ್ತ ಹೆಜ್ಜೆ ಹಾಕಿದರು. ನೂರಾರು ಮಂದಿ ಅವರನ್ನು ಹಿಂಬಾಲಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಕೆಎಸ್‌ ಮುಖ್ಯಸ್ಥ ನರೇಶ್‌ ಟಿಕಾಯತ್‌ ಅವರು ಕ್ರೀಡಾಪಟುಗಳ ಮನವೊಲಿಸಿ ಪದಕ ವಿಸರ್ಜನೆ ತಡೆದರು. ''ಐದು ದಿನ ಸಮಯ ಕೊಡಿ ನಿಮ್ಮ ಹೋರಾಟಕ್ಕೆ ತಾತ್ವಿಕ ಜಯ ಲಭಿಸುವಂತೆ ನಾವು ಮಾಡುತ್ತೇವೆ. ರೈತ ಹೋರಾಟದಂತೆ ನಿಮ್ಮ ಹೋರಾಟಕ್ಕೂ ಗೆಲುವು ಸಿಗುತ್ತದೆ, ಸ್ವಲ್ಪ ಸಮಾಧಾನದಿಂದಿರಿ,'' ಎಂದು ಮನವಿ ಮಾಡಿದರು.

ಟಿಕಾಯತ್‌ ಮಾತಿಗೆ ಮಣಿದ ಕ್ರೀಡಾಪಟುಗಳು ತಾವು ತಂದಿದ್ದ ಪದಕಗಳನ್ನು ಅವರ ಕೈಗೆ ಕೊಟ್ಟು, ''ಐದು ದಿನದೊಳಗೆ ಫೆಡರೇಷನ್‌ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಇಲ್ಲಿಗೆ ಬಂದು ಪದಕಗಳನ್ನು ವಿಸರ್ಜಿಸುತ್ತೇವೆ,'' ಎಂದು ಘೋಷಣೆ ಮಾಡಿದರು.

ಅಂತಾರಾಷ್ಟ್ರೀಯ ಕುಸ್ತಿ ಆಡಳಿತ ಮಂಡಳಿ (ಯುಡಬ್ಲ್ಯೂಡಬ್ಲ್ಯು) ಭಾರತೀಯ ಕುಸ್ತಿ ಪಟುಗಳ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಹಾಗೂ ಭಾರತೀಯ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ನಡೆದುಕೊಂಡು ಬಗೆಯನ್ನು ಖಂಡಿಸಿದೆ. ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳನ್ನು ತಾತ್ಕಾಲಿಕವಾಗಿ ಬಂಧಿಸಿರುವ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದೆ.

ನಿಗದಿತ ಸಮಯದಲ್ಲಿ ಚುನಾವಣೆ ನಡೆಸದಿದ್ದರೆ ಅಮಾನತು ಎಚ್ಚರಿಕೆ

ನಿಗದಿತ ಸಮಯದೊಳಗೆ ಭಾರತೀಯ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ತನ್ನ ಚುನಾವಣೆಯನ್ನು ನಡೆಸಲು ವಿಫಲವಾದರೆ ಅಮಾನತುಗೊಳಿಸುವುದಾಗಿ ಅಂತಾರಾಷ್ಟ್ರೀಯ ಕುಸ್ತಿ ಆಡಳಿತ ಮಂಡಳಿ (ಯುಡಬ್ಲ್ಯೂಡಬ್ಲ್ಯು) ಎಚ್ಚರಿಕೆ ನೀಡಿದೆ.

Ads on article

Advertise in articles 1

advertising articles 2

Advertise under the article