ಆನೆ–ಮಾನವ ಸಂಘರ್ಷವನ್ನು ಶಾಶ್ವತವಾಗಿ ನಿಯಂತ್ರಿಸಲು ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ: ಅರಣ್ಯ ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು: ಆನೆ ಮತ್ತು ಮಾನವ ಸಂಘರ್ಷವನ್ನು ಶಾಶ್ವತವಾಗಿ ನಿಯಂತ್ರಿಸಲು ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಇಂದು ವಿಧಾನಪರಿಷತ್ತಿನಲ್ಲಿ ಆನೆ–ಮಾನವ ಸಂಘರ್ಷ ಕುರಿತು ಚರ್ಚೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು, ಕಾಡಿನಂಚಿನ ಪ್ರದೇಶಗಳಲ್ಲಿ ಸಂಭವಿಸಿದ ಮಾನವೀಯ ಜೀವಹಾನಿ ಅತ್ಯಂತ ದುಃಖದ ಸಂಗತಿ; ಮಾನವ ಜೀವ ಅಮೂಲ್ಯವಾದ್ದು. ಮೃತರ ಕುಟುಂಬಗಳಿಗೆ ಈಗಾಗಲೇ ₹5 ಲಕ್ಷ ಪರಿಹಾರ ನೀಡಲಾಗಿದ್ದು, ಉಳಿದ ₹15 ಲಕ್ಷವನ್ನು ವಾರದೊಳಗೆ ನೀಡಲಾಗುವುದು ಎಂದರು.
ಆನೆ–ಮಾನವ ಸಂಘರ್ಷವನ್ನು ಶಾಶ್ವತವಾಗಿ ನಿಯಂತ್ರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. 2025–26ನೇ ಸಾಲಿನಲ್ಲಿ ಮಡಿಕೇರಿ ವಿಭಾಗಕ್ಕೆ 7 ಕಿ.ಮೀ ಹಾಗೂ ನಾಗರಹೊಳೆ ವಿಭಾಗಕ್ಕೆ 20 ಕಿ.ಮೀ ರೈಲು ಹಳಿ ತಡೆಗೋಡೆ (Railway Barricade) ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಜೊತೆಗೆ ಆನೆ ನಿಗ್ರಹ ಕಂದಕ, ಸೌರ ವಿದ್ಯುತ್ ಬೇಲಿ ನಿರ್ವಹಣೆ ಹಾಗೂ ಆನೆ ಕಾರ್ಯಪಡೆಗಳ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.