ಚುನಾವಣೆಯ ಹಿನ್ನೆಲೆ; ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ
ಬೆಂಗಳೂರು: ಶನಿವಾರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಗರದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ರೋಡ್ ಶೋ ನಡೆಸಿದರು.
ನಗರದ ಸೋಮೇಶ್ವರ ಸಭಾಭವನದಿಂದ ಮೋದಿಯವರು ರೋಡ್ ಶೋ ಆರಂಭಿಸಿದ್ದು, ಪ್ರಧಾನಮಂತ್ರಿಗಳೊಂದಿಗೆ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅವರು ಸಾಥ್ ನೀಡಿದರು.
ಮೋದಿಯವರ ರೋಡ್ ಶೋ ವೇಳೆ ಮಾರ್ಗದುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಹೂವಿನ ಮಳೆ ಸುರಿದು, ಮೋದಿ ಪರ ಜೈಕಾರ ಕೂಗಿದರು. ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ನಡೆಸಿದ್ದು, ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗೆ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಿತು. ರೇಷ್ಮೆಯ ಕೇಸರಿ ಮೈಸೂರು ಪೇಟಾದಲ್ಲಿ ಕಂಗೊಳಿಸಿದ್ದು, ತೆರೆದ ವಾಹನದಲ್ಲಿ ಮೋದಿ ಅಬ್ಬರದ ರೋಡ್ ಶೋ ನಡೆಸಿದರು.
ಈ ಸಂದರ್ಭದಲ್ಲಿ ವಿವಿಧೆಡೆ ಜಾನಪದ ಕಲಾತಂಡಗಳ ಪ್ರದರ್ಶನ ನೀಡಿದ್ದು, ಇಡೀ ರೋಡ್ ಶೋ ಮೇಳದಂತೆ ಕಂಗೊಳಿಸಿತು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ರೋಡ್ ಶೋ ವೇಳೆ ಹಲವಾರು ಕಲಾವಿದರು ಹನುಮನ ವೇಷ ಧರಿಸಿ, ಕಾಂಗ್ರೆಸ್'ಗೆ ತಿರುಗೇಟು ನೀಡಿದ್ದು ಕಂಡು ಬಂದಿತು.
ರೋಡ್ ಶೋ ವೇಳೆ ಮಾತನಾಡಿದ ಮೋದಿಯವರು, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.