ಮೈಸೂರು ಬಳಿ ಖಾಸಗಿ ಬಸ್'ಗೆ ಡಿಕ್ಕಿ ಹೊಡೆದ ಇನ್ನೋವಾ ಕಾರು: 10 ಮಂದಿ ದುರ್ಮರಣ; ಮೂವರು ಗಂಭೀರ
ಮೈಸೂರು: ಖಾಸಗಿ ಬಸ್ ಹಾಗೂ ಇನ್ನೋವಾ ಕಾರು ನಡುವೆ ನಡೆದ ಅಪಘಾತದಲ್ಲಿ 10 ಮಂದಿ ದುರ್ಮರಣಕ್ಕೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ಸೋಮವಾರ ಖಾಸಗಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಈ ಭೀಕರ ಅಪಘಾತದಲ್ಲಿ 10 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ ಕೊಳ್ಳೇಗಾಲ - ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 10 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಮೃತರೆಲ್ಲರೂ ಬಳ್ಳಾರಿ ಮೂಲದವರಾಗಿದ್ದು, ಮೈಸೂರು ಪ್ರವಾಸಕ್ಕೆಂದು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಇನ್ನುಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೂವರು ಗಾಯಾಳುಗಳನ್ನು ಬಳ್ಳಾರಿ ಮೂಲದ ಜನಾರ್ದನ್ (45), ಪುನೀತ್ (4), ಶಶಿಕುಮಾರ್(24) ಎಂದು ಗುರುತಿಸಲಾಗಿದ್ದು, ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಪಘಾತದ ತೀವ್ರತೆಗೆ ಇನ್ನೊವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಮಗು ಸೇರಿದಂತೆ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.